ನವದೆಹಲಿ, ಜು.20 (DaijiworldNews/HR): ಯುರೋಪ್, ಅಮೇರಿಕಾ ಹಾಗೂ ಏಷ್ಯಾದ ಅನೇಕ ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಭಾರತದ ಹಲವು ರಾಜ್ಯಗಳಲ್ಲಿ ಕೂಡ ಸೋಂಕು ನಿಧಾನವಾಗಿ ಏರಿಕೆಯಾಗುತ್ತಿದ್ದು, 3ನೇ ಅಲೆ ತಡೆಯಲು ಟೆಸ್ಟ್, ಟ್ರ್ಯಾಕ್, ಟ್ರೀಟ್ ಮತ್ತು ಟೀಕಾ (ಲಸಿಕೆ) ಎಂಬ 4ಟಿ ಸೂತ್ರವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಸಿಎಂಗಳಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಯೊಂದಿಗೆ ಸಭೆಯಲ್ಲಿ ಮಾತನಾಡಿದ ಅವರು, " 2ನೇ ಅಲೆ ಆರಂಭದ ಮಾದರಿಯಲ್ಲೇ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕೊರೋನಾ ಸ್ಥಿತಿ ಕಳವಳಕಾರಿಯಾಗಿದ್ದು, ಸಂಭವನೀಯ 3ನೇ ಅಲೆ ತಡೆಯಲು ಸರ್ಕಾರಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ರಾಜ್ಯಗಳಿಗೆ ಸೂಚಿಸಿದ್ದಾರೆ.
ಇನ್ನು "ದೇಶದಲ್ಲಿ ಮೊದಲ ಕೊರೊನಾ ಪ್ರಕರಣ ಕೇರಳದಲ್ಲಿ ವರದಿಯಾಗಿದ್ದು,ಆಗ ಮೊದಲನೇ ಅಲೆ ಆರಂಭವಾಗಿತ್ತು. ನಂತರ ಈ ವರ್ಷದ ಫೆಬ್ರವರಿಯಲ್ಲಿ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೇಸುಗಳು ಮೊದಲು ಹೆಚ್ಚಾಗಿ ದೇಶದಲ್ಲಿ 2ನೇ ಅಲೆ ಪ್ರಾರಂಭವಾಗಿದ್ದು, ಈಗಲೂ ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ದೇಶದಲ್ಲೇ ಅತ್ಯಧಿಕ ಕೇಸು ದಾಖಲು ಆರಂಭವಾಗಿದೆ. ಹೀಗಾಗಿ ಇದು 3ನೇ ಅಲೆ ಆರಂಭದ ಸಂಕೇತ ಎಂಬ ಆತಂಕಕ್ಕೆ ಕಾರಣವಾಗಿದೆ" ಎಂದಿದ್ದಾರೆ.
"ಕೊರೋನಾ ಎರಡನೇ ಅಲೆ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಜನವರಿ ಹಾಗೂ ಫೆಬ್ರವರಿ ಮಾಹೆಯಲ್ಲಿ ಸೋಂಕು ಏರಿಕೆ ಕಂಡಿದ್ದು, ಈಗಲೂ ಕೂಡ ಅದೇ ಪರಿಸ್ಥಿತಿ ಇದ್ದು, ಈ ಎರಡೂ ರಾಜ್ಯಗಳಲ್ಲಿ ಅಧಿಕ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಬೇಕು. 4 ಟಿ ಸೂತ್ರ ಪಾಲಿಸಿ 3ನೇ ಅಲೆ ತಡೆಯಬೇಕು"ಎಂದು ಸಂದೇಶ ನೀಡಿದ್ದಾರೆ.