ಮುಂಬೈ, ಜು.20 (DaijiworldNews/HR): ಹಿರಿಯ ನಾಗರಿಕರೊಬ್ಬರು ರೈಲ್ವೆ ಹಳಿ ದಾಟಲು ಪ್ರಯತ್ನಿಸುತ್ತಿದ್ದಾಗ ಹಳಿ ಮೇಲೆ ಬಿದ್ದು ಇನ್ನೇನು ರೈಲು ಹರಿದು ಸಾವನ್ನಪ್ಪುತ್ತಿದ್ದರು ಅನ್ನುವಷ್ಟರಲ್ಲಿ ಲೋಕೊ ಪೈಲಟ್ ಅವರ ಸಮಯಪ್ರಜ್ಞೆಯಿಂದ ಸಾವಿನಿಂದ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.
ಈ ಘಟನೆ ಭಾನುವಾರ ಮುಂಬೈನ ಕಲ್ಯಾಣ್ ಪ್ರದೇಶದಲ್ಲಿ ಸಂಭವಿಸಿದ್ದು, ಮುಂಬೈ-ವಾರಣಾಸಿ ರೈಲಿನ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕಿದ ಕಾರಣ ವೃದ್ಧ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರೈಲ್ವೆ ಹಳಿಯ ಮೇಲೆ ವೃದ್ಧ ಬಿದ್ದಾಗ ರೈಲ್ವೆ ನಿಲ್ದಾಣದ ಮುಖ್ಯ ಶಾಶ್ವತ ಮಾರ್ಗ ಇನ್ಸ್ ಪೆಕ್ಟರ್ (ಸಿಪಿಡಬ್ಲ್ಯುಐ) ಸಂತೋಷ್ ಕುಮಾರ್ ಎಚ್ಚರಿಕೆ ನೀಡಿದ್ದು, ಲೋಕೋ ಪೈಲಟ್ ಎಸ್.ಕೆ.ಪ್ರಧಾನ್ ಮತ್ತು ಅವರ ಸಹಾಯಕ ರವಿ ಶಂಕರ್ ಜಿ. ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದಾರೆ.
ಇನ್ನು ವೃದ್ಧರ ಕಾಲು ರೈಲಿನ ಕೆಳಗೆ ಸಿಕ್ಕಿಬಿದ್ದಿದ್ದು, ನಂತರ ಲೋಕೋ ಪೈಲಟ್ ಗಳು ಮತ್ತು ಇತರ ರೈಲ್ವೆ ಸಿಬ್ಬಂದಿ ಆ ವ್ಯಕ್ತಿಯನ್ನು ಹೊರತೆಗೆದು ಸುರಕ್ಷಿತ ಸ್ಥಳದಲ್ಲಿ ವಿಶ್ರಾಂತಿ ಪಡೆಯುವಂತೆ ಮಾಡಿದರು.
ಕೇಂದ್ರ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಲೋಕ್ ಕನ್ಸಾಲ್ ಅವರು ಆ ವ್ಯಕ್ತಿಯನ್ನು ಉಳಿಸಿದ ಮೂವರು ರೈಲ್ವೆ ಸಿಬ್ಬಂದಿಗೆ ತಲಾ 2000 ರೂ.ಗಳ ನಗದು ಬಹುಮಾನವನ್ನು ಘೋಷಿಸಿದ್ದಾರೆ.