ಬೆಂಗಳೂರು, ಜು.19 (DaijiworldNews/HR): "ಕರ್ನಾಟಕದಲ್ಲಿ ಇಂದು ಮೊದಲನೆಯ ದಿನದ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿದ್ದು, ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 8,75,508 ವಿದ್ಯಾರ್ಥಿಗಳಲ್ಲಿ ಕೇವಲ 2,992 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಶೇ.99.64ರಷ್ಟು ವಿದ್ಯಾರ್ಥಿಗಳು ಈ ಬಾರಿಯ ಪರೀಕ್ಷೆಯಲ್ಲಿ ಹಾಜರಾಗಿದ್ದಾರೆ" ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, "ರಾಜ್ಯದಲ್ಲಿ ಈ ಬಾರಿ ಕೊರೊನಾ ಪಾಸಿಟಿವ್ ಇದ್ದೂ ಪರೀಕ್ಷೆ ಬರೆದಂತ ವಿದ್ಯಾರ್ಥಿಗಳ ಸಂಖ್ಯೆ 58 ಆಗಿದ್ದು, ಇವರಲ್ಲಿ ಬೆಂಗಳೂರು ಉತ್ತರ ಜಿಲ್ಲೆಯಿಂದ ಒಬ್ಬರು, ಬೆಂಗಳೂರು ದಕ್ಷಿಣ ಇಬ್ಬರು, ಮೈಸೂರು ಒಬ್ಬರು, ಮಂಡ್ಯದಲ್ಲಿ ನಾಲ್ವರು, ಉಡುಪಿಯಲ್ಲಿ ಮೂವರು, ಮಂಗಳೂರಿನಲ್ಲಿ 16 ವಿದ್ಯಾರ್ಥಿಗಳು, ಕೊಡಗು ಜಿಲ್ಲೆಯಲ್ಲಿ ಐವರು, ಚಿತ್ರದುರ್ಗದಲ್ಲಿ 7, ಚಿಕ್ಕಮಗಳೂರು 7, ಶಿವಮೊಗ್ಗ 1, ಹಾಸನ 3, ಗದಗ 1, ಬೆಳಗಾವಿ 2, ಉತ್ತರ ಕನ್ನಡ 5, ಕಲಬುರ್ಗಿ 1, ಕೊಪ್ಪಳ 1 ಸೇರಿದಂತೆ ಒಟ್ಟು 58 ವಿದ್ಯಾರ್ಥಿಗಳು ಕೊರೊನಾ ಕೇರ್ ಸೆಂಟರ್ ನಲ್ಲಿ ಪರೀಕ್ಷೆ ಬರೆದಿದ್ದಾರೆ" ಎಂದರು.
ಇನ್ನು 2,817 ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ಇದ್ದು ಪರೀಕ್ಷೆ ಬರೆದಿದ್ದು, ಈ ಬಾರಿ ಸಮೀಪದಲ್ಲಿನ ಪರೀಕ್ಷಾ ಕೇಂದ್ರದಲ್ಲೇ ಪರೀಕ್ಷೆ ಬರೆದಂತ ವಲಸೆ ವಿದ್ಯಾರ್ಥಿಗಳ ಸಂಖ್ಯೆ 10,693 ಆಗಿದ್ದಾರೆ. ಹೊರರಾಜ್ಯಗಳಿಂದ 761 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, 760 ವಿದ್ಯಾರ್ಥಿಗಳು ಹೊರ ರಾಜ್ಯದವರು ಇಂದಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿ ಬರೆದಿದ್ದಾರೆ ಎಂದರು.