ಬೆಂಗಳೂರು, ಜು 19 (DaijiworldNews/PY): "ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗುತ್ತಿದೆ ಎಂದು ಈ ಮೊದಲೇ ನಾನು ತಿಳಿಸಿದ್ದೆ. ಇದೀಗ ಆ ಕಾಲ ಸಮೀಪಿಸುತ್ತಿದೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಓರ್ವ ಭ್ರಷ್ಟ ಸಿಎಂ ಹೋಗಬೇಕು. ಇದರಿಂದ ಕಾಂಗ್ರೆಸ್ಗೆ ಯಾವುದೇ ರೀತಿಯಾದ ಲಾಭ-ನಷ್ಟ ಇಲ್ಲ. ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ" ಎಂದಿದ್ದಾರೆ.
"ಸಿಎಂ ಬದಲಾವಣೆ ವಿಚಾರದ ಬಗ್ಗೆ ಮೊದಲೇ ನನಗೆ ಮಾಹಿತಿ ಇತ್ತು. ಈ ಬಗ್ಗೆ ಯಾರು ನಂಬಿಲಿಲ್ಲ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ತೆಗೆದರೆ ಮತ್ತೊಬ್ಬರು ಸಿಂ ಆಗುತ್ತಾರೆ. ಹಾಗಾಗಿ ಅವಧಿಪೂರ್ಣ ಚುನಾವಣೆ ಬರುತ್ತದೆ ಎಂದು ನನಗೆ ಅನ್ನಿಸುತ್ತಿಲ್ಲ" ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ತಮಗೆ ರಾಹುಲ್ ಗಾಂಧಿ ಬುಲಾವ್ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ರಾಹುಲ್ ಗಾಂಧಿ ಅವರು ನಮ್ಮನ್ನು ಏಕೆ ಕರೆದಿದ್ದಾರೆ ಎಂದು ಹೇಳೋದಿಕ್ಕೆ ಆಗುತ್ತಾ?. ಅವರು ನಮ್ಮ ವರಿಷ್ಠರು. ನಮ್ಮನ್ನು ಕರೆದಿದ್ದು, ನಾವು ಹೋಗುತ್ತಿದ್ದೇವೆ" ಎಂದಿದ್ದಾರೆ.