ಬೆಂಗಳೂರು, ಜು.19 (DaijiworldNews/HR): "ಮುಂದಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಾದ್ಯಂತ ಎಲ್ಲಾ ವೃತ್ತಿಪರ ಕೋರ್ಸ್ಗಳನ್ನು ಕನ್ನಡದಲ್ಲಿ ಕಲಿಯಲು ಅವಕಾಶ ಕಲ್ಪಿಸಲಾಗುವುದು" ಎಂದು ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, "ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ನಂತರ ಮಾತೃ ಭಾಷೆಯನ್ನು ಬಲಗೊಳಿಸುವ ಪ್ರಯತ್ನಗಳನ್ನು ನಡೆಸಲಾಗುತ್ತಿದ್ದು, ಪ್ರಾದೇಶಿಕ ಭಾಷೆಗಳಲ್ಲಿ ವೃತ್ತಿಪರ ಶಿಕ್ಷಣ ನೀಡುವುದನ್ನು ಹೊಸ ಶಿಕ್ಷಣ ನೀತಿ ಒತ್ತಿ ಹೇಳುತ್ತದೆ. ಅದರಂತೆಯೇ ಸರ್ಕಾರವೂ ಈ ನಿಟ್ಟಿನಲ್ಲಿ ಮುಂದುವರೆಯಲಿದ್ದು, ಈಗಾಗಲೇ ಪಠ್ಯಕ್ರಮಗಳ ಅನುವಾದ ಕಾರ್ಯವನ್ನು ಸರ್ಕಾರ ಆರಂಭಿಸಿದೆ" ಎಂದರು.
ಇನ್ನು ಕನ್ನಡ ಭಾಷೆ ಕೂಗ ಏಳಿಗೆಯಾಗಬೇಕು. ಎಲ್ಲಾ ಕ್ಷೇತ್ರಗಳಲ್ಲಿಯೂ ಕನ್ನಡ ಇರಬೇಕು. ಹೊಸ ಶಿಕ್ಷಣ ನೀತಿ ಹೊರಗಿನವರು ನಮ್ಮ ಮೇಲೆ ತಮ್ಮ ಭಾಷೆಯನ್ನು ಹೇರಲು ಅನುವು ಮಾಡಿಕೊಡುವುದಿಲ್ಲ. ಶಿಕ್ಷಣ ನೀತಿ ಪ್ರಕಾರ ಮಕ್ಕಳು ಎರಡು ದೇಶೀಯ ಭಾಷೆಗಳನ್ನು ಹಾಗೂ ಒಂದು ಅಂತರರಾಷ್ಟ್ರೀಯ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು. ಅದರಲ್ಲಿ ಮೊದಲು ಮಾತೃಭಾಷೆಗೆ ಆದ್ಯತೆ ನೀಡಬೇಕು ನಂತರ ಅನ್ಯಭಾಷೆ" ಎಂದು ಹೇಳಿದ್ದಾರೆ.