ಬೆಂಗಳೂರು, ಜು 19 (DaijiworldNews/PY): ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಸಂಚಲನ ಮೂಡಿಸಿದೆ. ಈ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದ್ದು, "ಕಾಮಿಡಿ ಪಾತ್ರ ಮಾಡುತ್ತಿದ್ದ ಕಟೀಲ್, ಈಗ ಬಿಜೆಪಿಯ ಹಲವರಿಗೆ ವಿಲ್ಲನ್ ಪಾತ್ರಧಾರಿಯಾಗಿದ್ದಾರೆ!" ಎಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಸಿಎಂ ಯಡಿಯೂರಪ್ಪ ವಿರುದ್ಧ ಕತ್ತಿ ಮಸೆಯುತ್ತಿದ್ದ ಮೀರ್ ಸಾದಿಕ್ ಯಾರೆನ್ನುವುದು ಈಗ ತಿಳಿದಿದೆ! ಪಕ್ಷದ ರಾಜ್ಯಾಧ್ಯಕ್ಷರಾಗಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದ ಯತ್ನಾಳ್ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಸಚಿವ ಯೋಗೇಶ್ವರ್ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ. ಏಕೆಂದರೆ ಸಂಚಿನ ಸೂತ್ರದಾರನೇ ನಳಿನ್ ಕುಮಾರ್ ಕಟೀಲ್!" ಎಂದು ಲೇವಡಿ ಮಾಡಿದೆ.
"ಬಿಜೆಪಿ ಪಕ್ಷದ ಮೀರ್ ಸಾದಿಕ್ ನಳಿನ್ ಕುಮಾರ್ ಕಟೀಲ್ ಬಗ್ಗೆ ಸಿಎಂ ಯಡಿಯೂರಪ್ಪಅವರಿಗೆ ಈ ಹಿಂದೆಯೇ ಮನವರಿಕೆಯಾಗಿತ್ತು. ಆದರೆ ಜಗದೀಶ್ ಶೆಟ್ಟರ್ ಹಾಗೂ ಕೆ.ಎಸ್. ಈಶ್ವರಪ್ಪ ಅವರು ತಮ್ಮ ಬಗಲಿನಲ್ಲಿಯೇ ಬೆಂಕಿ ಇದ್ದಿದ್ದನ್ನು ಅರಿತಿರಲಿಲ್ಲ! ಕಾಮಿಡಿ ಪಾತ್ರ ಮಾಡುತ್ತಿದ್ದ ಕಟೀಲ್, ಈಗ ಬಿಜೆಪಿಯ ಹಲವರಿಗೆ ವಿಲ್ಲನ್ ಪಾತ್ರಧಾರಿಯಾಗಿದ್ದಾರೆ!" ಎಂದಿದೆ.
"ಸಿಎಂ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಹಾಗೂ ಕೆ.ಎಸ್.ಈಶ್ವರಪ್ಪ ಅವರು ರಾಜಕಾರಣಕ್ಕೆ ಬಂದಾಗ ನಳಿನ್ ಕುಮಾರ್ ಕಟೀಲ್ ಗೋಲಿ ಆಡುವುದನ್ನೂ ಕಲಿತಿರಲಿಲ್ಲ! ಮಂಗಳೂರು ಬಾಗದಲ್ಲಿ ಅಬ್ಬೇಪಾರಿಯಾಗಿ ತಿರುಗುತ್ತಿದ್ದ ಕಟೀಲ್ ಇಂದು ಪಕ್ಷ ಕಟ್ಟಿದವರನ್ನೇ ಮೂಲೆಗುಂಪು ಮಾಡಲು ಸಜ್ಜಾಗಿದ್ದಾರೆ. ಬಿಜೆಪಿಯನ್ನ ಮುಳುಗಿಸಲು ಬೇರೆ ಯಾರ ಪ್ರಯತ್ನವೂ ಬೇಡ, ಕಟೀಲ್ ಒಬ್ಬರೇ ಸಾಕು" ಎಂದು ದೂರಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋವೊಂದು ಇದೀಗ ವೈರಲ್ ಆದ್ದು, "ಮೂವರ ಹೆಸರುಗಳಿದ್ದು, ಅವರಲ್ಲಿ ಒಬ್ಬರು ಸಿಎಂ ಆಗುವ ಸಾಧ್ಯತೆ ಇದೆ" ಎಂದು ಆಡಿಯೋದಲ್ಲಿ ಹೇಳಲಾಗಿದೆ.
"ಯಾರಿಗೆ ಹೇಳೋಕೆ ಹೋಗಬೇಡಿ, ಈಶ್ವರಪ್ಪ ಜಗದೀಶ್ ಶೆಟ್ಟರ್ ಟೀಮನ್ನು ತೆಗೆಯುತ್ತೇವೆ. ಎಲ್ಲ ಹೊಸ ಟೀಮ್ ಮಾಡುತ್ತಿದ್ದೇವೆ. ಈಗ ಸದ್ಯಕ್ಕೆ ಯಾರಿಗೂ ಕೊಡಲು ಹೋಗಬೇಡಿ" ಎಂದು ತುಳು ಭಾಷೆಯಲ್ಲಿ ಸಂಭಾಷಣೆ ಮಾಡಿರುವ ಆಡಿಯೋ ವೈರಲ್ ಆಗಿದೆ.
"ಏನು ತೊಂದರೆ ಇಲ್ಲ, ಯಾರಾದರೂ ಇನ್ನು ಮುಂದೆ ನಮ್ಮ ಕೈಯಲ್ಲೆ. ಮೂರು ಹೆಸರುಗಳಿವೆ. ಇದು ಯಾವುದಾದರೂ ಆಗುವ ಅವಕಾಶವಿದೆ. ಇಲ್ಲಿಯವರನ್ನು ಯಾರನ್ನು ಮಾಡೋದಿಲ್ಲ. ದೆಹಲಿಯಿಂದಲೇ ಮಾಡುತ್ತಾರೆ" ಎನ್ನಲಾಗಿದೆ.
ಇನ್ನು ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಳಿನ್, "ಈ ಆಡಿಯೋ ನನ್ನದಲ್ಲ. ನನ್ನ ಹಂತದಲ್ಲಿ ಯಾವುದೇ ರೀತಿಯಲ್ಲಿ ಚರ್ಚೆಯಾಗಿಲ್ಲ. ಈ ಬಗ್ಗೆ ತನಿಖೆಗೆ ಸಿಎಂ ಬಿಎಸ್ ವೈಗೆ ಆದೇಶ ನೀಡುತ್ತೇನೆ. ನಾನು ಎಲ್ಲೂ ಕೂಡ ಆ ರೀತಿ ಮಾತನಾಡಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.