ಮಂಗಳೂರು, ಜು. 18 (DaijiworldNews/SM): ಬಿಜೆಪಿ ಪಕ್ಷದೊಳಗೆ ಕೇಳಿಬಂದಿರುವ ನಾಯಕತ್ವ ಬದಲಾವಣೆ ವಿಚಾರ ಚರ್ಚೆಯಲ್ಲಿರುವಾಗಲೇ ಇದಕ್ಕೆ ಪುಷ್ಠಿ ಎಂಬಂತೆ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಮತ್ತೊಂದು ಆಡಿಯೋ ಇದೀಗ ವೈರಲ್ ಆಗಿದೆ. ಮೂವರ ಹೆಸರುಗಳಿದ್ದು, ಅವರಲ್ಲಿ ಒಬ್ಬರು ಸಿಎಂ ಆಗುವ ಸಾಧ್ಯತೆ ಇದೆ ಎಂದು ಆಡಿಯೋದಲ್ಲಿ ಹೇಳಲಾಗಿದೆ.
‘ಯಾರಿಗೆ ಹೇಳೋಕೆ ಹೋಗಬೇಡಿ, ಈಶ್ವರಪ್ಪ ಜಗದೀಶ್ ಶೆಟ್ಟರ್ ಟೀಮನ್ನು ತೆಗೆಯುತ್ತೇವೆ. ಎಲ್ಲ ಹೊಸ ಟೀಮ್ ಮಾಡುತ್ತಿದ್ದೇವೆ. ಈಗ ಸದ್ಯಕ್ಕೆ ಯಾರಿಗೂ ಕೊಡಲು ಹೋಗಬೇಡಿ’ ಎಂದು ತುಳು ಭಾಷೆಯಲ್ಲಿ ಸಂಭಾಷಣೆ ಮಾಡಿರುವ ಆಡಿಯೋ ವೈರಲ್ ಆಗಿದೆ.
‘ಏನು ತೊಂದರೆ ಇಲ್ಲ, ಯಾರಾದರೂ ಇನ್ನು ಮುಂದೆ ನಮ್ಮ ಕೈಯಲ್ಲೆ. ಮೂರು ಹೆಸರುಗಳಿವೆ. ಇದು ಯಾವುದಾದರೂ ಆಗುವ ಅವಕಾಶವಿದೆ. ಇಲ್ಲಿಯವರನ್ನು ಯಾರನ್ನು ಮಾಡೋದಿಲ್ಲ. ದೆಹಲಿಯಿಂದಲೇ ಮಾಡುತ್ತಾರೆ’ ಎನ್ನಲಾಗಿದೆ.
ಇನ್ನು ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ನಳಿನ್, ಈ ಆಡಿಯೋ ನನ್ನದಲ್ಲ. ನನ್ನ ಹಂತದಲ್ಲಿ ಯಾವುದೇ ರೀತಿಯಲ್ಲಿ ಚರ್ಚೆಯಾಗಿಲ್ಲ. ಈ ಬಗ್ಗೆ ತನಿಖೆಗೆ ಸಿಎಂ ಬಿಎಸ್ ವೈಗೆ ಆದೇಶ ನೀಡುತ್ತೇನೆ. ನಾನು ಎಲ್ಲೂ ಕೂಡ ಆ ರೀತಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.