ದಾವಣಗೆರೆ, ಜು 18 (DaijiworldNews/PY): "ಬಿ.ಎಸ್ ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ" ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಎಂ ಅವರು ಪಕ್ಷದ ಹೈಕಮಾಂಡ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ರಾಜ್ಯದ ಅಭಿವೃದ್ದಿ ಹಾಗೂ ಸ್ಥಿತಿಗತಿಗಳ ವಿಚಾರದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಹಾಗೆಂದ ಮಾತ್ರಕ್ಕೆ ಸಿಎ ಬದಲಾವಣೆ ಮಾಡಲಾಗುತ್ತದೆ ಎಂದು ಹೇಳುವುದು ಸೂಕ್ತವಲ್ಲ. ಅವರ ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ" ಎಂದಿದ್ದಾರೆ.
"ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆಯಾಗಲಿ, ಪುನಾರಚಣೆ ವಿಚಾರದ ಬಗ್ಗೆ ಎಲ್ಲಿಯೂ ಹೇಳಿಲ್ಲ. ಮಾಧ್ಯಮದಲ್ಲಿ ಚರ್ಚೆ ಆದ ಕೂಡಲೇ ಸಚಿವ ಸಂಪುಟ ವಿಸ್ತರಣೆ ಆಗಿಬಿಡುತ್ತಾ?. ಸಿಎಂ ಹೇಳಿದ್ದಲ್ಲಿ ಮಾತ್ರವೇ ಆ ವಿಚಾರಕ್ಕೆ ಪುಷ್ಟಿ ಬರುತ್ತದೆ" ಎಂದು ಹೇಳಿದ್ದಾರೆ.
"ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ರೀತಿಯ ಚರ್ಚೆಯಾಗಿಲ್ಲ. ನನ್ನ ಇಲಾಖೆಗೆ ಸಂಬಂಧಿಸಿದಂತೆ ಕೆಲಸ ಇದ್ದರೆ ನಾನು ದೆಹಲಿಗೆ ಹೋಗಿ ಕೇಂದ್ರ ನಗರಾಭಿವೃದ್ದಿ ಸಚಿವರನ್ನು ಭೇಟಿ ಮಾಡುತ್ತೇನೆ. ಇದಕ್ಕೆ ಬೇರೆ ರೀತಿಯ ಅರ್ಥ ಕಲ್ಪಿಸುವ ಕೆಲಸ ಬೇಡ. ನಾನು ಜಿಲ್ಲಾ ಪ್ರವಾಸದಲ್ಲಿದ್ದೇನೆ" ಎಂದು ತಿಳಿಸಿದ್ದಾರೆ.