ಬೆಂಗಳೂರು, ಜು 18 (DaijiworldNews/PY): "ರೈತರ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದ ಬಿಎಸ್. ಯಡಿಯೂರಪ್ಪ ಕುರ್ಚಿಗಾಗಿ ಹೋರಾಡುತ್ತಿದ್ದಾರೆ" ಎಂದು ಕಾಂಗ್ರೆಸ್ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಭಾರಿ ಮಳೆಯಿಂದ ಬೆಳೆ ನಾಶವಾಗಿ ರೈತರು ಕಂಗೆಟ್ಟಿದ್ದಾರೆ. ಈಗಾಗಲೇ ಪ್ರವಾಹ ಹಾಗೂ ಲಾಕ್ಡೌನ್ ನಷ್ಟದಿಂದ ಕಂಗಾಲಾದ ರೈತರಿಗೆ ಧೈರ್ಯ ತುಂಬುವ ಯೋಜನೆ ರೂಪಿಸಿಲ್ಲ ಸರ್ಕಾರ. ರೈತರ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದ ಬಿಎಸ್. ಯಡಿಯೂರಪ್ಪ ಕುರ್ಚಿಗಾಗಿ ಹೋರಾಡುತ್ತಿದ್ದಾರೆ, ಕೃಷಿ ಸಚಿವ ಬಿ.ಸಿ.ಪಾಟೀಲ್ ನಾಪತ್ತೆಯಾಗಿದ್ದಾರೆ! ರೈತರನ್ನ ಕೇಳುವವರಾರು?" ಎಂದು ಪ್ರಶ್ನಿಸಿದೆ.
'ಡ್ರಗ್ಸ್ ದಂಧೆಯಲ್ಲಿ ತೊಡಗಿದ ಉದ್ಯೋಗ ವಂಚಿತರು' ಈ ಸುದ್ದಿ ಬಿಜೆಪಿ ಸರ್ಕಾರದ ಎರಡು ವೈಫಲ್ಯಗಳಿಗೆ ಕನ್ನಡಿ ಹಿಡಿದಿದೆ. ಬಿಜೆಪಿಯ ಅತೀ ಕೆಟ್ಟ ಆಡಳಿತದಿಂದ ಉದ್ಯೋಗ ಕಳೆದುಕೊಂಡ ಯುವಜನರ ಬದುಕು ಹಾಗೂ ಭವಿಷ್ಯಕ್ಕೆ ಕತ್ತಲೆ ಆವರಿಸಿದೆ. ರಾಜ್ಯದಲ್ಲಿ ಕ್ರೈಮ್ ಹಾಗೂ ಡ್ರಗ್ಸ್ ದಂಧೆ ತಡೆಗಟ್ಟುವಲ್ಲಿ ವಿಫಲವಾಗಿದೆ ಈ ಅಸಮರ್ಥ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದೆ.
"ಬಿಎಸ್ ಯಡಿಯೂರಪ್ಪ ಅವರು ದೆಹಲಿಗೆ ತೆರಳಿದ್ದಾರೆ. ಲಸಿಕೆ ಕೊರತೆ ನೀಗಿಸಲು ತೆರಳಿದ್ದಾರೆಯೇ?. ರಾಜ್ಯಕ್ಕೆ ಬರಬೇಕಿದ್ದ ಜಿಎಸ್ಟಿ ಕೇಳಲು ಹೋಗಿದ್ದಾ?. ನೆರೆ ಪರಿಹಾರದ ಬಾಕಿ ಕೇಳಲು ಹೋಗಿದ್ದೇ?. 3ನೇ ಅಲೆ ಎದುರಿಸಲು ನೆರವಿನ ಪ್ಯಾಕೇಜ್ ತರಲು ಹೋಗಿದ್ದಾರೆಯೇ? ಅಥವಾ ಸಿಎಂ ಕುರ್ಚಿ ಭದ್ರಪಡಿಸಲು ಹೋಗಿದ್ದಾರೆಯೇ ಬಿಜೆಪಿ!?" ಎಂದು ಕೇಳಿದೆ.