ಮುಂಬೈ,ಜು.18 (DaijiworldNews/HR): ಮುಂಬೈನಲ್ಲಿ ಶನಿವಾರ ತಡರಾತ್ರಿ ಸುರಿದ ಭಾರೀ ಮಳೆಯ ಪರಿಣಾಮ ಚೆಂಬೂರ್ ಮತ್ತು ವಿಖ್ರೋಲಿಯಲ್ಲಿ ಗೋಡೆ ಕುಸಿದ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆಯಾಗಿದ್ದು, ಅನೇಕ ಮಂದಿಯನ್ನು ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.
ಮುಂಬೈ ನಗರದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜನರು ಮುಕ್ತವಾಗಿ ಹೊರಗೆ ಹೋಗದಂತೆ ಸೂಚಿಸಲಾಗಿದೆ.
ಚೆಂಬೂರಿನ ಭಾರತ್ ನಗರ ಪ್ರದೇಶದಿಂದ ಹದಿನೈದು ಜನರನ್ನು ಮತ್ತು ವಿಕ್ರೊಲಿಯ ಸೂರ್ಯನಗರದ ಒಂಬತ್ತು ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯ ಪ್ರಾಣಹಾನಿ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, "ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಗಾಯಗೊಂಡವರಿಗೆ 50,000 ರೂ. ನೀಡಿದ್ದಾರೆ" ಎಂದು ಪಿಎಂಒ ಟ್ವಿಟರ್ನಲ್ಲಿ ತಿಳಿಸಿದೆ.
ಇನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಚೇರಿ ಸಂತ್ರಸ್ತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಘೋಷಿಸಿದೆ.