ಬೆಂಗಳೂರು, ಜು 18 (DaijiworldNews/PY): "ಸರ್ಕಾರದ ಮಾರ್ಗಸೂಚಿಯಿಂದ ಕೊರೊನಾ ನಿಯಂತ್ರಿಸಲು ಸಾಧ್ಯವಿಲ್ಲ. ಸಾರ್ವಜನಿಕರು ಎಚ್ಚೆತ್ತುಕೊಂಡಲ್ಲಿ ಮಾತ್ರವೇ ಕೊರೊನಾ ನಿಯಂತ್ರಣ ಸಾಧ್ಯ" ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸರ್ಕಾರ ಮಾರ್ಗಸೂಚಿಗಳನ್ನು ಜಾರಿ ಮಾಡಿದ ಕೂಡಲೇ ಕೊರೊನಾ ನಿಯಂತ್ರಣಕ್ಕೆ ಬರುತ್ತದೆ ಎಂದು ಭಾವಿಸಬೇಡಿ. ಪ್ರತಿಯೋರ್ವರು ಎಚ್ಚೆತ್ತುಕೊಂಡು ನಿಮ್ಮ ನಿಮ್ಮ ಮನೆಯಲ್ಲಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ, ಅನಗತ್ಯ ಹೊರಹೋಗದಿರುವುದು ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದಿದ್ದಾರೆ.
"ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಅವರು ಕೊರೊನಾ ನಿಯಂತ್ರಣವನ್ನು ಸಮರ್ಪಕವಾಗಿ ನಿಯಂತ್ರಿಸಿದ್ದಾರೆ. ಅತ್ಯಂತ ಸೋಂಕು ಹೊಂದಿರುವ ಅಪಖ್ಯಾತಿಗೆ ಗುರಿಯಾಗಿದ್ದ ಭಾರತ ಇಂದು ಕೊರೊನಾ ನಿಯಂತ್ರಣ ಮಾಡಿ"ದೆ ಎಂದು ಶ್ಲಾಘಿಸಿದ್ದಾರೆ.
"ಹಾಸನ ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಅಬಕಾರಿ ಇಲಾಖೆ ಸಚಿವ ಗೋಪಾಲಯ್ಯನವರು ಕೊರೊನಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿದ್ದಾರೆ. ಈ ವೇಳೆ ಸಂಕಷ್ಟಕ್ಕೊಳಗಾದ ಜನರಿಗೆ ಫುಡ್ ಕಿಟ್ ವಿತರಣೆ, ಸಾರ್ವಜನಿಕರಿಗೆ ಉಚಿತ ಆಹಾರ ಧಾನ್ಯಗಳ ವಿತರಣೆ , ಮಾಸ್ಕ್ ಸ್ಯಾನಿಟೈಸರ್, ಲಸಿಕೆ, ಔಷಧಗಳನ್ನು ನೀಡುತ್ತಿದ್ದಾರೆ" ಎಂದಿದ್ದಾರೆ.
"ಲಾಕ್ಡೌನ್ ವೇಳೆಯಲ್ಲೂ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದಷ್ಟು ಬೇಗ ಕೊರೊನಾ ಮುಕ್ತರಾಗಿ ಎಲ್ಲರಿಗೂ ಉದ್ಯೋಗ ಸಿಗುವಂತಾಗಲಿ" ಎಂದು ತಿಳಿಸಿದ್ದಾರೆ.