ನವದೆಹಲಿ, ಜು 18 (DaijiworldNews/PY): "ತಮ್ಮ ಮನೆ ಹಾಗೂ ಅರಮನೆಯನ್ನು ಕಳೆದುಕೊಳ್ಳುವ ಆತಂಕದಿಂದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಆರ್ಎಸ್ಎಸ್-ಬಿಜೆಪಿ ಸೇರಿದರು" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಆನ್ಲೈನ್ ಕಾರ್ಯಕ್ರಮವೊಂದರಲ್ಲಿ ಪಕ್ಷದ 3000ಕ್ಕೂ ಅಧಿಕ ಸೋಶಿಯಲ್ ಮೀಡಿಯಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, "ಜ್ಯೋತಿರಾದಿತ್ಯ ಸಿಂಧಿಯಾ ಅವರು ತಮ್ಮ ಮನೆ ಹಾಗೂ ಅರಮನೆ ಕಳೆದುಕೊಳ್ಳುವ ಭೀತಿಯಿಂದ ಬಿಜೆಪಿಗೆ ಸೇರ್ಪಡೆಯಾದರು" ಎಂದಿದ್ದಾರೆ.
"ಕಳೆದ ವರ್ಷ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ತೊರೆದ ಜ್ಯೋತಿರಾಧಿತ್ಯಾ ಸಿಂಧಿಯಾ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಈಗ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರು. ಆರ್ಎಸ್ಎಸ್ನ ಭಯವಿರುವವರು ಪಕ್ಷವನ್ನು ತ್ಯಜಿಸಲು ಸ್ವತಂತ್ರರಿದ್ದಾರೆ. ಹಾಗೇಯೇ ಸಂಘ-ಪರಿವಾರದ ವಿರುದ್ದ ಧೈರ್ಯವಾಗಿ ಹೋರಾಡುವ ಹೊರಗಿನ ನಿರ್ಭಿತ ನಾಯಕರನ್ನು ಪಕ್ಷ ಸೇರಿಸಿಕೊಳ್ಳಲಿದೆ" ಎಂದು ತಿಳಿಸಿದ್ದಾರೆ.