ಕಲಬುರಗಿ, ಜು.17 (DaijiworldNews/HR): ಲಿಂಗಾಯಿತ ಸಮುದಾಯವು ಬಿಜೆಪಿಯ ಆಸ್ತಿಯಲ್ಲ. ಕಾಂಗ್ರೆಸ್ನಲ್ಲಿ ಕೂಡ ಲಿಂಗಾಯಿತ ಸಮುದಾಯದ ಅನೇಕ ಮಂದಿ ಪ್ರಭಾವಿ ನಾಯಕರಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಾಯಕರು ಪಕ್ಷದತ್ತ ಮುಖ ಮಾಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಎಂ.ಬಿ.ಪಾಟೀಲ್ ಕಾಂಗ್ರೆಸ್ನ ಪ್ರಭಾವಿ ನಾಯಕರು. ಅದೇ ರೀತಿ ಎಸ್.ಆರ್.ಪಾಟೀಲ್ ವಿಧಾನಪರಿಷತ್ನ ಪ್ರತಿಪಕ್ಷದ ನಾಯಕರಾಗಿದ್ದು, ಅವರ ಜತೆಗೆ ಹಲವಾರು ನಾಯಕರು ಲಿಂಗಾಯಿತ ಸಮುದಾಯದ ನಾಯಕರನ್ನು ಕಾಂಗ್ರೆಸ್ಗೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ" ಎಂದರು.
ಇನ್ನು ಬಿಜೆಪಿಯವರಿಗೆ ಲಿಂಗಾಯಿತ ಸಮುದಾಯ ಶಾಶ್ವತ ಆಸ್ತಿ ಅಲ್ಲ. ಬಿ.ಎಸ್.ಯಡಿಯೂರಪ್ಪ ಅವರ ಬೆಂಬಲಿಗರು ಕಾಂಗ್ರೆಸ್ನತ್ತ ಮುಖ ಮಾಡಿದ್ದು, ಪಕ್ಷ ಸೇರ್ಪಡೆ ಕುರಿತಂತೆ ಅಲ್ಲಂ ವೀರಭದ್ರಪ್ಪ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಿದೆ. ಬಹಳಷ್ಟು ಮಂದಿ ನಾಯಕರು ಕಾಂಗ್ರೆಸ್ ಸೇರಲು ಆಸಕ್ತರಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ನಾನು ಅವರ ಹೆಸರುಗಳನ್ನು ಬಹಿರಂಗ ಪಡಿಸುವುದಿಲ" ಎಂದು ಹೇಳಿದ್ದಾರೆ.