ಬೆಂಗಳೂರು, ಜು 17 (DaijiworldNews/PY): ಸಿಎಂ ಬಿಎಸ್ ಯಡಿಯೂರಪ್ಪ ಅವರ ದೆಹಲಿ ಪ್ರವಾಸದ ವಿಚಾರವಾಗಿ ಹೊಸ ಬಾಂಬ್ ಸಿಡಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು, "ದೆಹಲಿಗೆ ತೆರಳಿದ ಯಡಿಯೂರಪ್ಪ ಅವರು ಆರು ದೊಡ್ಡ ದೊಡ್ಡ ಬ್ಯಾಗ್ಗಳನ್ನು ಹಿಡಿದುಕೊಂಡು ಹೋಗಿದ್ದಾರೆ" ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಎಂ ಯಡಿಯೂರಪ್ಪ ಅವರು ತಮ್ಮ ಇಬ್ಬರು ಪುತ್ರರು ಹಾಗೂ ಕೆಲ ಅಧಿಕಾರಿಗಳ ಜೊತೆ ನಿನ್ನೆ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ. ಈ ವೇಳೆ ಅವರು ಆರು ದೊಡ್ಡ ದೊಡ್ಡ ಬ್ಯಾಗ್ಗಳನ್ನು ಕೊಂಡೊಯ್ದಿದ್ದಾರೆ ಎನ್ನುವ ಮಾಹಿತಿ ನನಗೆ ಬಂದಿದೆ" ಎಂದು ಹೇಳಿದ್ದಾರೆ.
"ಆರು ಬ್ಯಾಗ್ಗಳಲ್ಲಿ ರಾಜ್ಯದ ವಿಷಯಗಳ್ನು ಹಾಕಿದ್ದಾರೋ ಅಥವಾ ಅದರಲ್ಲಿ ಬೇರೆ ಏನಿತ್ತು ಎನ್ನುವುದು ತಿಳಿದಿಲ್ಲ. ನಿನ್ನೆ ಸಂಜೆ ಸಿಎಂ ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಹೋದಾಗ ಆರು ಬ್ಯಾಗ್ಗಳೂ ಹೋದವೋ ಅಥವಾ ಅವರು ಒಬ್ಬರೇ ಹೋಗಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಯುತ್ತದೆ" ಎಂದು ತಿಳಿಸಿದ್ದಾರೆ.
ಅಕ್ರಮ ಗಣಿಗಾರಿಗೆ ವಿಚಾರದ ಬಗ್ಗೆ ರಾಜ್ಯಪಾಲರಿಗೆ ದೂರು ಬಗ್ಗೆ ಮಾತನಾಡಿದ ಅವರು, "ರಾಜ್ಯದ ಹಲವು ಕಡೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಈ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿ. ವೈಯುಕ್ತಿಕವಾಗಿ ನನ್ನ ಹಾಗೂ ಪಕ್ಷದ ಬೆಂಬಲ ಇದೆ" ಎಂದು ತಿಳಿಸಿದ್ದಾರೆ.