ನವದೆಹಲಿ, ಜು 17 (DaijiworldNews/PY): "ಸೆಪ್ಟೆಂಬರ್ 30ರೊಳಗೆ ಎಲ್ಲಾ ದಾಖಲಾತಿ ಮುಗಿಸಿ. ಅಕ್ಟೋಬರ್ 1ರಿಂದ ತರಗತಿ ಪ್ರಾರಂಭವಾಗಲಿದೆ" ಎಂದು ಯುಜಿಸಿ ಕಾಲೇಜುಗಳಿಗೆ ಸೂಚಿಸಿದೆ.
ಕೊರೊನಾ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಯುಜಿಸಿ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಪರೀಕ್ಷೆ ಮಾರ್ಗಸೂಚಿ ಹಾಗೂ ದಾಖಲಾತಿ ಕ್ಯಾಲೆಂಡರ್ ಬಿಡುಗಡೆ ಮಾಡಿದೆ.
"ಯುಜಿಸಿ ಬಿಡುಗಡೆ ಮಾಡಿದ ಟೈಂ ಟೇಬಲ್ ಪ್ರಕಾರ, ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಆಗಸ್ಟ್ 31ರೊಳಗೆ ಅಂತಿಮ ವರ್ಷದ ಅಥವಾ ಸೆಮಿಸ್ಟರ್ ಪರೀಕ್ಷೆಯನ್ನು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಮುಗಿಸಬೇಕು" ಎಂದು ತಿಳಿಸಿದೆ.
ಮಧ್ಯಂತರ ಸೆಮಿಸ್ಟರ್ ಅಥವಾ ವಾರ್ಷಿಕ ವಿದ್ಯಾರ್ಥಿಗಳನ್ನು ಆಂತರಿಕ ಮೌಲ್ಯಮಾಪನ ಹಾಗೂ ಹಿಂದಿನ ಸೆಮಿಸ್ಟರ್ ಪರೀಕ್ಷೆಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. 2020ರಲ್ಲಿ ಅನುಸರಿಸಿದ ನಿಯಮಗಳಿಗೆ ಈ ತೀರ್ಮಾನ ಅನುಗುಣವಾಗಿರಲಿದೆ.
ಅಕ್ಟೋಬರ್ 1ರಿಂದ ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ಆರಂಭವಾಗುತ್ತದೆ. ಡಿಸೆಂಬರ್ 31ರವರೆಗೆ ಅರ್ಹತಾ ಪರೀಕ್ಷೆಗಳ ಸಂಬಂಧಿತ ದಾಖಲೆಗಳನ್ನು ಸ್ವೀಕರಿಸಬಹುದಾಗಿದೆ. ದ್ವಿತೀಯ ಪಿಯು ಅಂಕಗಳ ಘೋಷಣೆಯಲ್ಲಿ ವಿಳಂಬವಾದಲ್ಲಿ ಶೈಕ್ಷಣಿಕ ಸೆಷನ್ ಆರಂಭಕ್ಕೆ ವಿಶ್ವವಿದ್ಯಾಲಯ ಅಕ್ಟೋಬರ್ 18ರವರೆಗೆ ಸಮಯ ನೀಡಿದೆ.
"ರಾಜ್ಯ ಮಂಡಳಿಗಳು ಹಾಗೂ ಸಿಬಿಎಸ್ಇ, ಐಸಿಎಸ್ಇ ಫಲಿತಾಂಶ ಘೋಷಣೆ ಮಾಡಿದ ಬಳಿಕವೇ 2021-22ರ ಶೈಕ್ಷಣಿಕ ಅಧಿವೇಶನಕ್ಕೆ ಪದವಿಪೂರ್ವ ಕೋರ್ಸ್ ಪ್ರವೇಶ ಪ್ರಕ್ರಿಯೆಗಳು ಆರಂಭವಾಗುವುದನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಖಚಿತಪಡಿಸಿಕೊಳ್ಳಬೇಕು. ಎಲ್ಲಾ ಶಾಲಾ ಮಂಡಳಿಗಳು ತಮ್ಮ ಫಲಿತಾಂಶಗಳನ್ನು ಪ್ರಕಟಿಸುತ್ತವೆ ಎಂದು ನಿರೀಕ್ಷಿಸಲಾಗಿದೆ" ಎಂದು ಯುಜಿಸಿ ಅಧಿಸೂಚನೆಯಲ್ಲಿ ಹೇಳಿದೆ.
ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಹಾಗೂ ಸಮರ್ಥ ಅಧಿಕಾರಿಗಳು ನೀಡುವ ಅಗತ್ಯ ಮಾರ್ಗಸೂಚಿಗಳನ್ನು ಅನುಸರಿಸಿ 20 ಅಕ್ಟೋಬರ್ 2021ರಿಂದ ಜುಲೈ 2022ರ ಅವಧಿಯಲ್ಲಿ ಸಂಸ್ಥೆಗಳು ತರಗತಿಗಳು, ಸೆಮಿಸ್ಟರ್ ಇತ್ಯಾದಿಗಳನ್ನು ಯೋಜಿಸಬಹುದು ಎನ್ನಲಾಗಿದೆ.
"ಕೊರೊನಾ ಸ್ಥಿಗತಿಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ವವಿದ್ಯಾಲಯಗಳು ಅಕ್ಟೋಬರ್ 31ರವರೆಗೆ ಪ್ರವೇಶ ಹಿಂತೆಗೆದುಕೊಳ್ಳಲು ಯಾವುದೇ ರದ್ದತಿ ಶುಲ್ಕವನ್ನು ವಿಧಿಸುವುದಿಲ್ಲ" ಎಂದು ಯುಜಿಸಿ ತಿಳಿಸಿದೆ.