ನವದೆಹಲಿ, ಜು 17 (DaijiworldNews/MS): ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆಯಾಗಿ ಆಯ್ಕೆಯಾಗಿ, ಅಧಿಕಾರ ಸ್ವೀಕರಿಸುವುದಕ್ಕಿಂತ ಮುಂಚೆಯೇ ರಾಜಿನಾಮೆ ನೀಡಿದ ಉಡುಪಿಯ ರಶ್ಮಿ ಸಮಂತ್ ಅವರು ಬೆದರಿಕೆಗೆ ಮತ್ತು ನಿಂದನೆಗೆ ಒಳಗಾಗಿ ಹುದ್ದೆ ತ್ಯಜಿಸಬೇಕಾಯಿತು ಎಂದು ವಿ.ವಿ ಅಂತರಿಕಾ ತನಿಖಾ ಸಮಿತಿ ಖಚಿತಪಡಿಸಿದೆ.
ಇಂಗ್ಲೆಂಡ್ನ ಪ್ರತಿಷ್ಠಿತ ಆಕ್ಸ್ಫರ್ಡ್ ಸ್ಟುಡೆಂಟ್ ಯೂನಿಯನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸುವ ಮೂಲಕ ಭಾರೀ ಸುದ್ದಿಯಾಗಿದ್ದ ಹಾಗೂ ನಿಂದನೆಗೆ ಒಳಗಾಗಿ ಬಳಿಕ ಹುದ್ದೆ ತ್ಯಜಿಸಿದ್ದ ಭಾರತದ ಉಡುಪಿ ಮೂಲದ ರಶ್ಮಿ ಸಾಮಂತ್ ಅವರನ್ನು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಆಂತರಿಕ ತನಿಖೆ ಸಮಿತಿಯೂ ಸಮರ್ಥಿಸಿಕೊಂಡಿದೆ.
ಚುನಾವಣೆಯಲ್ಲಿ ವಿಜಯ ಸಾಧಿಸಿದ ಬಳಿಕ ರಶ್ಮಿ ಅವರ ವಿರುದ್ದ ಇಸ್ಲಾಮೋಫೋಬಿಕ್, ಟ್ರಾನ್ಸ್ಫೋಬಿಕ್ ಎಂದು ಆರೋಪಿಸಿ ಸೈಬರ್ ದಾಳಿ ಮಾಡುವ ಮೂಲಕ ರಾಜೀನಾಮೆ ನೀಡುವಂತೆ ಮಾಡಲಾಯ್ತು. ಅವರ ಧರ್ಮ ಹಾಗೂ ಪೋಷಕರನ್ನು ಸಾರ್ವಜನಿಕವಾಗಿ ಅವಹೇಳನ ಮಾಡಲಾಗಿತ್ತು. ಈ ಘಟನೆ ಬಳಿಕ ರಶ್ಮಿ ಮಾನಸಿಕವಾಗಿ ಕುಗ್ಗಿ ಹೋಗಿದ್ದರು.
ಈ ಕುರಿತು ಜುಲೈ 16 ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ರಶ್ಮಿ ಪರ ವಕೀಲ ಆದಿತ್ಯ ಶ್ರೀನಿವಾಸನ್ ಅವರು, " ತನಿಖೆಯ ಫಲಿತಾಂಶದ ಬಗ್ಗೆ ನನಗೆ ಸಂತೋಷವಾಗಿದೆ. ರಶ್ಮಿಯನ್ನು ಸಾರ್ವಜನಿಕ ಅವಮಾನಕ್ಕೆ ಒಳಪಡಿಸಿರುವುದು ದುರದೃಷ್ಟಕರ ಎಂದು ನಾನು ಭಾವಿಸಿದ್ದೇನೆ. ಘಟನೆ ನಡೆದ ಬಳಿಕ ನಿಜಕ್ಕೂ ತಾಳ್ಮೆ ಮತ್ತು ಪರಿಶ್ರಮವನ್ನು ನಾನು ಮೆಚ್ಚುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಆನ್ಲೈನ್ ಕಿರುಕುಳಕ್ಕೆ ಬಲಿಪಶುವಾಗಿ ಹುದ್ದೆ ತ್ಯಜಿಸಿದ್ದ ರಶ್ಮಿ ಅವರು ತನಿಖಾ ಸಮಿತಿ ನೀಡಿದ ವರದಿ ಬಳಿಕ , ಬಹುನಿರೀಕ್ಷಿತ ಇತ್ಯರ್ಥವನ್ನು ಜುಲೈ 16ರ ಇಂದು ಸ್ವೀಕರಿಸಿದ್ದೇನೆ. ಇಂದು ನನ್ನ ಅಜ್ಜ ನನ್ನ ತೋಳುಗಳಲ್ಲಿ ಕೊನೆಯುಸಿರೆಳೆದ ನಾಲ್ಕು ವರ್ಷಗಳಾಗಿದೆ. ಅವರು ವಿಶೇಷ ವ್ಯಕ್ತಿ, ಸತ್ಯಕ್ಕಾಗಿ ಹೋರಾಟ ವ್ಯಕ್ತಿತ್ವ ಉಳ್ಳವರಾಗಿದ್ದರು. ಕಳೆದ ಕೆಲವು ತಿಂಗಳುಗಳಿಂದ ನಡೆದ ಘಟನೆಗಳು ನನಗೆ ಆಘಾತಕಾರಿಯಾಗಿತ್ತು. ನನ್ನನ್ನು, ನನ್ನ ಕುಟುಂಬವನ್ನು, ನನ್ನ ನಂಬಿಕೆಯನ್ನು ಕಿರುಕುಳ, ದೌರ್ಜನ್ಯ ಮತ್ತು ಅವಮಾನಿಸುವುದರಲ್ಲಿ ಕೆಲವರು ಅಕ್ಷರಶಃ ಸಂತೋಷಪಟ್ಟಿದ್ದಾರೆ. ನನ್ನ ಅಜ್ಜ ಬಹಳ ಕಷ್ಟಗಳನ್ನು ಸಹಿಸಿದ್ದು ಇದೇ ನನಗೆ ಸ್ಪೂರ್ತಿಯಾಗಿದೆ ಎಂದು ಬರೆದುಕೊಂಡಿದ್ದಾರೆ.
ರಶ್ಮಿ ಸಮಂತ್ ಅವರು ಆಯ್ಕೆಯಾದ ಬಳಿಕ ಆಕ್ಸ್ಫರ್ಡ್ನ ಪ್ರಾಧ್ಯಾಪಕ ಡಾ. ಅಭಿಜಿತ್ ಸರ್ಕಾರ್ ರಶ್ಮಿಯ ಪೋಷಕರನ್ನು ವಿವಾದಕ್ಕೆ ಎಳೆದಿದ್ದರು, ರಶ್ಮಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಭಗವಾನ್ ಶ್ರೀ ರಾಮ್ ಚಿತ್ರವನ್ನು ಹೊಂದಿದ್ದಕ್ಕಾಗಿ ಅವರನ್ನು ನಿಂದಿಸಿದ್ದರು. ಮಾತ್ರವಲ್ಲದೆ ವಿದ್ಯಾರ್ಥಿ ಪರಿಷತ್ ಚುನಾವಣೆಗೆ ರಶ್ಮಿಯವರಿಗೆ ಪ್ರಧಾನಿ ಮೋದಿಯವರು ಧನಸಹಾಯ ನೀಡಿದ್ದಾರೆ ಎಂದು ಹೇಳಿಕೊಂಡಿದ್ದರು. .
ರಶ್ಮಿ ಅವರು ಕರಾವಳಿ ಕರ್ನಾಟಕದಿಂದ ಬಂದವರು ಎಂದು ಆರೋಪಿಸುವ ಮೂಲಕ ಇಸ್ಲಾಮೋಫೋಬಿಕ್ ಎಂದು ಅವರು ಆರೋಪಿಸಿದ್ದರು, ಕರಾವಳಿಯೂ ಬಲಪಂಥಿಯರ ಭದ್ರಕೋಟೆ" ಎಂದು ಕರೆದು ನಿಂದಿಸಿದ್ದರು.