ಚೆನ್ನೈ, ಜು 17 (DaijiworldNews/PY): ಐಷಾರಾಮಿ ಕಾರಿನ ಸುಂಕ ಪಾವತಿಸುತ್ತೇನೆ. ಆದರೆ, ನ್ಯಾಯಾಲಯ ವಿಧಿಸಿದ್ದ ದಂಡವನ್ನು ರದ್ದುಪಡಿಸಬೇಕು ಎಂದು ನಟ ವಿಜಯ್ ಮದ್ರಾಸ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ವಿಜಯ್ ಅವರಿಗೆ ಹೈಕೋರ್ಟ್ 1 ಲಕ್ಷ ರೂ. ದಂಡ ವಿಧಿಸಿತ್ತು. ವಿದೇಶಿ ಕಾರಿನ ಮೇಲೆ ಆಮದು ಸುಂಕವನ್ನ ರದ್ದು ಮಾಡಬೇಕು ಎಂದು ಅವರರು ಕೋರಿದ್ದರು. ವಿಜಯ್ ಮನವಿ ತಿರಸ್ಕರಿಸಿ ದಂಡ ವಿಧಿಸಿದ್ದ ಹೈಕೋರ್ಟ್, ಚಿತ್ರ ನಟರು ನಿಜ ಜೀವನದಲ್ಲಿ ರೀಲ್ ಹೀರೋಗಳಾಗಬಾರದು ಎಂದು ಹೇಳಿತ್ತು.
ಹೈಕೋರ್ಟ್ನ ಅಭಿಪ್ರಾಯಯವನ್ನು ತೀರ್ಪಿನಿಂದ ತೆಗೆದುಹಾಕಬೇಕು. ಆಮದು ಸುಂಕವನ್ನು ಕಟ್ಟುತ್ತೇನೆ. ವಿಧಿಸಿರುವ ದಂಡವನ್ನು ರದ್ದುಗೊಳಿಸಿ ಎಂದು ಮದ್ರಾಸ್ ಹೈಕೋರ್ಟ್ಗೆ ನಟ ವಿಜಯ್ ಮೇಲ್ಮನವಿ ಸಲ್ಲಿಸಿದ್ದಾರೆ.
ನಟ ವಿಜಯ್ ಅವರು ಇಂಗ್ಲೆಂಡ್ನಿಂದ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಆಮದು ಮಾಡಿಕೊಂಡಿದ್ದರು. ಮದ್ರಾಸ್ ಹೈಕೋರ್ಟ್ಗೆ ವಿಜಯ್ ಅವರು ತೆರಿಗೆ ವಿನಾಯಿತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು.
ನಟರು ತೆರೆಯ ಮೇಲೆ ಭ್ರಷ್ಟಾಚಾರ ವಿರೋಧಿಗಳಾಗಿ, ನ್ಯಾಯ ಪರಿಪಾಲಕರಾಗಿ ದುಷ್ಟರನ್ನು ಸದೆಬಡಿಯುತ್ತಾರೆ. ಬೆಳ್ಳಿತೆರೆಯಲ್ಲಿ ಸಮಾಜಕ್ಕೆ ನ್ಯಾಯ ಒದಗಿಸುವವರೇ ಇವರು ಎಂಬಂತೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಆದರೆ, ನಿಜ ಜೀವನಕ್ಕೆ ಬಂದಾಗ ತೆರಿಗೆಯನ್ನು ವಂಚಿಸುವುದು ಸೂಕ್ತವಾದ ನಡವಳಿಕೆಯಲ್ಲ ಎಂದು ನ್ಯಾಯಾಲಯ ತಿಳಿಸಿತ್ತು.