ನವದೆಹಲಿ, ಜು 17 (DaijiworldNews/PY): ರಾಜ್ಯದಲ್ಲಿ ಕೊರೊನಾದ ಮೂರನೇ ಅಲೆ ಭೀತಿ ಎದುರಾಗಿದ್ದು, ನವಜಾತ ಶಿಶುಗಳಿಗೆ ವೆಂಟಿಲೇಟರ್ ಒದಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಕೊರೊನಾ ನಿಯಂತ್ರಣ ಬಗ್ಗೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗವಹಿಸಿದ್ದ ಸಿಎಂ ಯಡಿಯೂರಪ್ಪ, "ವೈದ್ಯರು ಸೇರಿದಂತೆ ಶುಶ್ರೂಷಕರು ಹಾಗೂ ಇತರೆ ವೈದ್ಯಕೀಯ ಸಿಬ್ಬಂದಿಗಳಿಗೆ ಒದಗಿಸಲಾಗಿದೆ. ಆಸ್ಪತ್ರೆಗಳಿಗೆ ಅಗತ್ಯ ಯಂತ್ರೋಪಕರಣಗಳನ್ನು ಪೂರೈಕೆ ಮಾಡಲಾಗಿದೆ. ಹೊಸ ಆರ್ಟಿಪಿಸಿಆರ್ ಹಾಗೂ ಜಿನೋಮ್ ಸೀಕ್ವೆನ್ಸಿಂಗ್ ಪ್ರಯೋಗಾಲಯಗಳನ್ನು ಪ್ರಾರಂಭಿಸಲಾಗುತ್ತಿದೆ" ಎಂದಿದ್ದಾರೆ.
"ಪಿಎಂ ಕೇರ್ಸ್ ಅಡಿಯಲ್ಲಿ ನವಜಾತ ಶಿಶುಗಳ ಆರೈಕೆಗೆ ಬಳಸುವ 800 ವೆಂಟಿಲೇಟರ್ಗಳನ್ನು ತುರ್ತಾಗಿ ರಾಜ್ಯಕ್ಕೆ ಒದಗಿಸಿ" ಎಂದು ಸಿಎಂ ಬಿಎಸ್ವೈ ಅವರು ಪ್ರಧಾನಿ ಮೋದಿ ಅವರಲ್ಲಿ ಕೇಳಿದರು.
"ರಾಜ್ಯದಲ್ಲಿ ಈವರೆಗೆ 2.62 ಕೋಟಿ ಡೋಸ್ಗಳಷ್ಟು ಲಸಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ 5 ಲಕ್ಷ ಡೋಸ್ಗಳಂತೆ ತಿಂಗಳಿಗೆ ಕನಿಷ್ಠ 1.5 ಕೋಟಿ ಡೋಸ್ ಲಸಿಕೆಯನ್ನು ರಾಜ್ಯಕ್ಕೆ ಹಂಚಿಕೆ ಮಾಡಬೇಕು" ಎಂದು ಮನವಿ ಮಾಡಿದ್ದಾರೆ.
"ರಾಜ್ಯದಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಈಗ ದಿನಕ್ಕೆ 1,900 ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿದೆ. ರಾಜ್ಯಗಳಲ್ಲಿ ಪ್ರಕರಣಗಳ ದೃಢಪ್ರಮಾಣ ದರ ಶೇ.1.42 ಹಾಗೂ ಮರಣ ಪ್ರಮಾಣ ಶೇ.1.25ಕ್ಕೆ ಇಳಿದಿದೆ" ಎಂದು ಸಿಎಂ ಪ್ರಧಾನಿಗೆ ಮಾಹಿತಿ ನೀಡಿದ್ದಾರೆ.
"ಕೊರೊನಾದ ಮೂರನೇ ಅಲೆ ಎದುರಿಸಲು ಕರ್ನಾಟಕ ಸಂಪೂರ್ಣ ಸಜ್ಜಾಗಿದೆ. ಎಲ್ಲಾ ಹಂತದ ಆಸ್ಪತ್ರೆಗಳಲ್ಲಿಯೂ ಕೂಡಾ ಮಕ್ಕಳ ವಾರ್ಡ್ಗಳನ್ನು ಮೇಲ್ದರ್ಜೆಗೇರಿಸಿದ್ದು, ಆಕ್ಸಿಜನ್ ಸಹಿತ ಹಾಸಿಗೆಗಳ ಸಂಖ್ಯೆಯನ್ನು ಕೂಡಾ ಹೆಚ್ಚಿಸಲಾಗಿದೆ" ಎಂದು ವಿವರಿಸಿದ್ದಾರೆ.