ಬೆಂಗಳೂರು, ಜು 17 (DaijiworldNews/MS): ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಎಸ್ಎಸ್ಎಲ್ ಸಿ ಪರೀಕ್ಷೆ ಜುಲೈ 19 ಮತ್ತು 22 ರಂದು ನಡೆಯಲಿದ್ದು, ಪರೀಕ್ಷಾ ಫಲಿತಾಂಶವು ಆಗಸ್ಟ್ ಎರಡನೇ ವಾರದೊಳಗೆ ಅಂದರೆ ದಿನಾಂಕ 10ರೊಳಗಾಗಿ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಈ ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಕೇವಲ ಬಹು ಆಯ್ಕೆ ಮಾದರಿ ಉತ್ತರಗಳಲ್ಲಿ ಸರಿ ಉತ್ತರಗಳನ್ನು ಓಎಂಆರ್ ಶೀಟ್ ನಲ್ಲಿ ಗುರುತಿಸಬೇಕಷ್ಟೇ. ಹಾಗಾಗಿ ಮೌಲ್ಯಮಾಪನಕ್ಕೆ ಹೆಚ್ಚಿನ ಕಾಲಾವಕಾಶ ಬೇಕಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಆ. 10ರೊಳಗೆ ಎಸ್ಎಸ್ಎಲ್ ಸಿ ಫಲಿತಾಂಶ ನೀಡಲಾಗುವುದು ಎಂದು ಹೇಳಿದ್ದಾರೆ.
ಅಲ್ಲದೆ ಈ ಬಾರಿ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಆಗಸ್ಟ್ ನಲ್ಲೇ ಮತ್ತೊಂದು ಪರೀಕ್ಷೆ ನಡೆಸಲಿದ್ದೇವೆ ಎಂದು ಅವರು ಹೇಳಿದ್ದಾರೆ.