ಬೆಂಗಳೂರು, ಜು 16 (DaijiworldNews/PY): "ಬಿಜೆಪಿಗರ ಬಾಯಲ್ಲಿ ಲಸಿಕೆ ಅಭಿಯಾನ, ವಾಸ್ತವದಲ್ಲಿ ಲಸಿಕೆ ಅಧ್ವಾನ!" ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಬಿಜೆಪಿಗರ ಬಾಯಲ್ಲಿ ಲಸಿಕೆ ಅಭಿಯಾನ, ವಾಸ್ತವದಲ್ಲಿ ಲಸಿಕೆ ಅಧ್ವಾನ! ದಿನದಿನಕ್ಕೂ ಲಸಿಕೆ ಕೊರತೆಯ ತೊಡಕುಗಳನ್ನು ಸರಿಪಡಿಸಿಕೊಳ್ಳುತ್ತಾ ಲಸಿಕಾಕರಣಕ್ಕೆ ವೇಗ ನೀಡಬೇಕಿತ್ತು, ಆದರೆ ಅಸಮರ್ಥ ಬಿಜೆಪಿ ದಿನ ಕಳೆದಂತೆ ಪರಿಸ್ಥಿತಿ ಅಧೋಗತಿಗೆ ಸಾಗಿದೆ. ಕರೋನಾ 3ನೇ ಅಲೆ ಬಂದರೂ ಲಸಿಕೆ ಕೊಟ್ಟು ಪೂರೈಸದು ಈ ಸರ್ಕಾರ" ಎಂದಿದೆ.
"ಜನರ ಜೀವದ ಬಗ್ಗೆ ಕಿಂಚಿತ್ ಕಾಳಜಿ ಇಲ್ಲದ ನಿರ್ದಯಿ ಬಿಜೆಪಿ ಸರ್ಕಾರದ ಅಯೋಗ್ಯತನಕ್ಕೆ ಜನರು ಮಳೆ, ಚಳಿಯಲ್ಲಿ ಪರದಾಡಿದರೂ ಲಸಿಕೆ ಸಿಗದೆ ವಾಪಸಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಪ್ರತಿನಿತ್ಯ ಕೊಡಲಾಗುತ್ತಿದ್ದ ಲಸಿಕೆ 1 ಲಕ್ಷದಿಂದ 35 ಸಾವಿರಕ್ಕೆ ಕುಸಿತ ಕಂಡಿದ್ದೇಕೆ? ಸುಧಾಕರ್ ಉತ್ತರಿಸುವರೇ?" ಎಂದು ಪ್ರಶ್ನಿಸಿದೆ.
"ಸುಧಾಕರ್ ಅವರೇ, ನಿತ್ಯ 5 ಲಕ್ಷ ಲಸಿಕೆಗಳ ಪೂರೈಸುವಂತೆ ಪ್ರಧಾನಿಗೆ ಮನವಿ ಮಾಡಿಕೊಳ್ಳುತ್ತೇವೆ ಎಂದಿದ್ದೀರಿ. ಈಗ ನೀವು ಮಾಡಬೇಕಿರುವುದು 'ಮನವಿ' ಅಲ್ಲ 'ಆಗ್ರಹ' ಕರ್ನಾಟಕಕ್ಕೆ ಅನ್ಯಾಯದ ಮೇಲೆ ಅನ್ಯಾಯ ಎಸಗುತ್ತಿದ್ದರೂ ಇನ್ನೂ ಮನವಿ ಮಾಡುವ ಹತಾಶ ಸ್ಥಿತಿಯಲ್ಲಿಯೇ ಇದೆ ಬಿಜೆಪಿ ಸರ್ಕಾರ" ಎಂದು ಹೇಳಿದೆ.
"ಎರಡೇ ತಿಂಗಳಲ್ಲಿ ಪ್ರತಿ ಲೀಟರ್ 11.14 ರೂಪಾಯಿಗಳಷ್ಟು ಏರಿಕೆಯಾಗಿದೆ, 40 ಬಾರಿ ಹೆಚ್ಚಳ ಕಂಡಿದೆ. ಇದೇ ಗತಿಯಲ್ಲಿ ಏರಿಕೆಯಾಗುತ್ತಿದ್ದರೆ ಶೀಘ್ರದಲ್ಲಿ ₹500/ಲೀ ಆಗುವುದರಲ್ಲಿ ಅನುಮಾನವೇ ಇಲ್ಲ! ಪ್ರಧಾನಿ ಮೋದಿ ಅವರಿಗೆ 2014ರ ಮುಂಚಿನ ಅವರದ್ದೇ ಭಾಷಣದ ಮಾತುಗಳ ಬದ್ಧತೆಯನ್ನ ಮರೆತು, ಜನರ ಸುಲಿಗೆಗೆ ಇಳಿದಿದ್ದಾರೆ" ಎಂದು ಟೀಕಿಸಿದೆ.