ನವದೆಹಲಿ, ಜು 16 (DaijiworldNews/PY): "ಕೊರೊನಾದ ಎರಡನೇ ಅಲೆಯಲ್ಲಿ ಯೋಗಿ ಸರ್ಕಾರ ಮಾಡಿರುವ ಕ್ರೌರ್ಯ, ನಿರ್ಲಕ್ಷ್ಯ ಹಾಗೂ ಅಸಮರ್ಪಕ ನಿರ್ವಹಣೆಯ ಸತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಟಿಫಿಕೇಟ್ನಿಂದ ಮರೆಮಾಚಲು ಸಾಧ್ಯವಿಲ್ಲ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೊರೊನಾದ ಎರಡನೇ ಅಲೆಯಲ್ಲಿ ಉತ್ತರಪ್ರದೇಶದ ಸಿಎಂ ಯೋಗಿ ಅದಿತ್ಯನಾಥ್ ಅವರು ಮಾಡಿರುವ ಕ್ರೌರ್ಯ, ನಿರ್ಲಕ್ಷ್ಯ ಹಾಗೂ ಅಸಮರ್ಪಕ ನಿರ್ವಹಣೆಯ ಸತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣಪತ್ರದಿಂದ ಮರೆಮಾಚಲು ಸಾಧ್ಯವಿಲ್ಲ" ಎಂದಿದ್ದಾರೆ.
"ಜನಸಾಮಾನ್ಯರು ಅಪಾರ ನೋವು ಎದುರಿಸಿದ್ದು, ಅಸಹಾಯಕರಾಗಿದ್ದಾರೆ. ಪ್ರಧಾನಿ ಮೋದಿ ಹಾಗೂ ಯೋಗಿ ಈ ಸತ್ಯವನ್ನು ಮರೆತಿರಬಹುದು. ಕೊರೊನಾ ನೋವಿನಿಂದ ಬಳಲುತ್ತಿರುವ ಜನರು ಅದನ್ನು ಮರೆಯಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಕೊರೊನಾ ಬಿಕ್ಕಟ್ಟನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ವಾರಣಾಸಿ ಭೇಟಿ ವೇಳೆ ಪ್ರಧಾನಿ ಮೋದಿ ಅವರು ಶ್ಲಾಘಿಸಿದ್ದರು. ಇದರ ವಿರುದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಕಿಡಿಕಾರಿದ್ದಾರೆ.