ಬೆಂಗಳೂರು, ಜು 16 (DaijiworldNews/PY): ವಿಧಾನಸೌಧದ ಕಾರಿಡಾರ್ನಲ್ಲಿ ಕೆಲ ಪತ್ರಿಕಾ, ವಿದ್ಯುನ್ಮಾನ ಮಾಧ್ಯಮಗಳಿಂದ ಛಾಯಾಗ್ರಹಣದಿಂದಾಗಿ ಹಲವು ಬಾರಿ ಗಣ್ಯ ವ್ಯಕ್ತಿಗಳ ಸುಗಮ ಚಲನವಲನಕ್ಕೆ ಅಡ್ಡಿಯಾಗುತ್ತಿದೆ. ಹಾಗಾಗಿ, ವಿಧಾನಸೌಧದ ಕಾರಿಡಾರ್ಗಳಲ್ಲಿ ವಿಡಿಯೋ ಚಿತ್ರೀಕರಣ, ಛಾಯಾಗ್ರಹಣಕ್ಕೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಸರ್ಕಾರದ ಅಧೀನ ಕಾರ್ಯದರ್ಶಿ ಕೆ ರವೀಂದ್ರ ಅವರು ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, "ವಿಧಾನಸಭೆ ಹಾಗೂ ಪರಿಷತ್ತಿನ ಕಲಾಪಗಳು ಹಾಗೂ ಇನ್ನಿತರೆ ಸಂದರ್ಭಗಳಲ್ಲಿ ಕೆಲ ಪತ್ರಿಕಾ, ವಿದ್ಯುನ್ಮಾನ ಮಾಧ್ಯಮದವರು ವಿಧಾನಸೌಧದ ಕಟ್ಟಡದ ಕಾರಿಡಾರ್ಗಳಲ್ಲಿ ವಿಡಿಯೋ ಚಿತ್ರೀಕರಣ, ಛಾಯಾಗ್ರಹಣ ಮಾಡುತ್ತಿದ್ದು, ಬಾರಿ ಗಣ್ಯ ವ್ಯಕ್ತಿಗಳ ಸುಗಮ ಚಲನವಲನಕ್ಕೆ ಅಡ್ಡಿವುಂಟಾಗಿರುವ ವಿಚಾರ ಗಮನಕ್ಕೆ ಬಂದಿದ್ದು, ಸುಗಮ ಚಲನೆ ಹಾಗೂ ಭದ್ರತೆಯ ಹಿತದೃಷ್ಟಿಯ ಕಾರಣದಿಂದ ಸಿಎಂ ಅವರು ಹಾಗೂ ಸಚಿವರುಗಳಿಂದ ಹೇಳಕೆ ಪಡೆಯುವ ಸಲುವಾಗಿ ವಿಧಾನಸೌಧದ ಕೆಂಗಲ್ ದ್ವಾರದ ಬಳಿ ಅವಕಾಶ ಕಲ್ಪಿಸಲಾಗಿದೆ" ಎಂದು ತಿಳಿಸಿದ್ದಾರೆ.
"ಇನ್ನು ಮುಂದೆ ನಿರ್ದಿಷ್ಟ ಪಡಿಸಿದ ಜಾಗವನ್ನು ಹೊರತುಪಡಿಸಿ ಕಾರಿಡಾರ್ಗಳಲ್ಲಿ ವಿಡಿಯೋ ಚಿತ್ರೀಕರಣ, ಛಾಯಾಗ್ರಹಣ ಮಾಡುವುದನ್ನು, ಭದ್ರತೆ ಹಾಗೂ ಶಿಸ್ತನ್ನು ಕಾಪಾಡುವ ನಿಟ್ಟಿನಲ್ಲಿ ನಿರ್ಬಂಧಿಸುವುದು ಸೂಕ್ತ ಎನ್ನುವ ಪ್ರಸ್ತಾವನೆ ಸಿಎಂ ಅವರಿಂದ ಅನುಮೋದಿಸಲ್ಪಟ್ಟಿದೆ" ಎಂದು ಹೇಳಿದ್ದಾರೆ.
"ಆದ್ದರಿಂದ, ಸಚಿವರುಗಳು ಇಲಾಖೆಯ ಪ್ರಗತಿ ಹಾಗೂ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕ ತಿಳುವಳಿಕೆಗೆ ತರುವ ಸಲುವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡುವ ವೇಳೆ ಸಭಾ ಕೊಠಡಿಗಳು ಅಥವಾ ಸಂಬಂಧಪಟ್ಟ ಸಚಿವರುಗಳ ಕೊಠಡಿಗಳಲ್ಲಿಯೇ ವ್ಯವಸ್ಥೆಗೊಳಿಸುವುದು ಸೂಕ್ತ. ಅದರಂತೆ ಸಚಿವರುಗಳ ಆಪ್ತ ಕಾರ್ಯದರ್ಶಿಗಳು ಇನ್ನು ಮುಂದೆ ಅಗತ್ಯ ಕ್ರಮವಹಿಸುವಂತೆ ಸೂಚಿಸಿದ್ದಾರೆ" ಎಂದು ತಿಳಿಸಿದ್ದಾರೆ.