ನವದೆಹಲಿ, ಜು 16 (DaijiworldNews/MS): ಭಾರತದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಕೊರೊನಾವೈರಸ್ ಲಸಿಕೆ ನೀಡುವುದರ ಕುರಿತು ವೈದ್ಯಕೀಯ ಪ್ರಯೋಗಗಳನ್ನು ನಡೆಸಲಾಗುತ್ತಿದ್ದು ಇದು ಅಂತಿಮ ಹಂತದಲ್ಲಿದೆ. ಇದರೊಂದಿಗೆ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ನೀತಿ ರಚಿಸಲಿದ್ದು, ತಜ್ಞರು ಅನುಮತಿ ನೀಡಿದಾಗ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ದೆಹಲಿ ಉಚ್ಛ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ತಿಳಿಸಿದೆ.
ದೆಹಲಿ ಹೈಕೋರ್ಟ್ನಲ್ಲಿ ಅಪ್ರಾಪ್ತ ವಯಸ್ಕನ ಪರವಾಗಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆಯ ವೇಳೆ, ಸರ್ಕಾರ ನ್ಯಾಯಲಯಕ್ಕೆ ಈ ಮಾಹಿತಿ ನೀಡಿದೆ. ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಅಪಾಯವಿರುವ ಭಯದ ಹಿನ್ನೆಲೆಯಲ್ಲಿ 12 ರಿಂದ 17 ವರ್ಷದ ವಯೋಮಾನದವರಿಗೆ ತಕ್ಷಣ ಕರೊನಾ ಲಸಿಕಾಕರಣಕ್ಕೆ ಆದೇಶಿಸಬೇಕೆಂದು ಅರ್ಜಿದಾರರು ಕೋರಿದ್ದರು.
ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ವಿಭಾಗೀಯ ಪೀಠವು ಅರ್ಜಿ ವಿಚಾರಣೆ ನಡೆಸಿ. " ಟ್ರಯಲ್ಸ್ ನಡೆಯಲಿ ಬಿಡಿ. ಒಂದು ವೇಳೆ ಆತುರಕ್ಕೆ ಬಿದ್ದು ಮಕ್ಕಳಿಗೆ ಲಸಿಕೆ ನೀಡಿದ್ದೇ ಆದರೆ ದೊಡ್ಡ ದುರಂತವೇ ಆಗಬಹುದು. ಒಂದು ವೇಳೆ ಆತುರಕ್ಕೆ ಬಿದ್ದು ಮಕ್ಕಳಿಗೆ ಲಸಿಕೆ ನೀಡಿದ್ದೇ ಆದರೆ ದೊಡ್ಡ ದುರಂತವೇ ಆಗಬಹುದು ಅಭಿಪ್ರಾಯಪಟ್ಟಿತು. ಜೊತೆಗೆ ಸಪ್ಟೆಂಬರ್ 6ಕ್ಕೆ ವಿಚಾರಣೆಯನ್ನು ಮುಂದೂಡಿದೆ.