ಬೆಂಗಳೂರು, ಜು.16 (DaijiworldNews/HR): "ಕರ್ನಾಟಕದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು 'ಗುಜರಾತ್ ಮಾಡೆಲ್' ನೋಡುವುದಕ್ಕೆ ಅಲ್ಲಿಗೆ ಹೋಗುತ್ತಿದ್ದಾರೆಂಬುದನ್ನು ಮಾಧ್ಯಮದಲ್ಲಿ ಗಮನಿಸಿದೆ. ಹಾಗಾಗಿ ನಮ್ಮ ರಾಜ್ಯದ ತೆರಿಗೆ ದುಡ್ಡನ್ನು ಅನ್ಯ ರಾಜ್ಯದ ಮಾಡೆಲ್ ನೋಡುವುದಕ್ಕೆ ಅನಗತ್ಯವಾಗಿ ಖರ್ಚು ಮಾಡಬೇಡಿ" ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "2008ರಲ್ಲಿ ಗುಜರಾತ್ನಲ್ಲಿ ನರೇಂದ್ರ ಮೋದಿ ಅವರು ಅಲ್ಲಿನ ಮುಖ್ಯಮಂತ್ರಿಯಾಗಿದ್ದಾಗ ಒಂದು ಡೊಲೆರಾ ಗಿಫ್ಟ್ ಸಿಟಿಯನ್ನೋ, ಸ್ಮಾರ್ಟ್ ಸಿಟಿಯನ್ನೋ ಮಾಡುತ್ತೀನಿ ಅಂತ ಹೇಳಿದ್ದು, ಅದರ ಒಂದು ತ್ರಿಡಿ ವಿಡಿಯೋ ಮಾಡಿ ಚುನಾವಣೆ ವೇಳೆ ದೊಡ್ಡ ಮಟ್ಟದ ಪ್ರಚಾರ ಮಾಡಿದ್ದರು. ಮಾಧ್ಯಮಗಳು ದೇಶದಲ್ಲೇ ಇದೊಂದು ಕ್ರಾಂತಿ ಎಂಬಷ್ಟರ ಮಟ್ಟಿಗೆ ಯೋಜನೆಗೆ ಪ್ರಚಾರ ನೀಡಿದ್ದವು" ಎಂದಿದ್ದಾರೆ.
ಇನ್ನು ಈಗ ಡೊಲೆರಾ ಸಿಟಿಯ ಕಾಮಗಾರಿ ಸಾಗುತ್ತಿರುವುದನ್ನು ಗಮನಿಸಿದಾಗ ಇನ್ನೂ ನೂರು ವರ್ಷವಾದರೂ ಪೂರ್ಣಗೊಳ್ಳುವುದಿಲ್ಲ ಎಂದು ಅನಿಸುತ್ತಿದೆ. ತ್ರಿಡಿಯಲ್ಲಿ ಇಂದ್ರ ಲೋಕವನ್ನೇ ಸೃಷ್ಟಿಸಿದ್ದಾರೆ. ಈಗ 12 ವರ್ಷದ ನಂತರ ನೋಡಿದರೆ ನಿಮಗೆ ಸತ್ಯಾಂಶ ಗೊತ್ತಾಗುತ್ತದೆ. ಅದನ್ನು ನೋಡಲು ಗುಜರಾತ್ ವರೆಗೆ ಹೋಗಬೇಕಿಲ್ಲ. ಇಲ್ಲಿಯೇ ಕುಳಿತು ಯೂಟ್ಯೂಬ್ನಲ್ಲಿ ನೋಡಬಹುದು. ಅಲ್ಲೆಲ್ಲೋ ಡೊಲೆರಾ ಸಿಟಿಯನ್ನು ನೋಡಿ ನಮ್ಮ ರಾಜ್ಯವನ್ನು ಕಟ್ಟುವಂತ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.