ನವದೆಹಲಿ, ಜು 16 (DaijiworldNews/PY): "ಡಿಜಿಟಲ್ ವ್ಯವಸ್ಥೆಯ ಮೂಲಕ ತನ್ನ ಜಾಮೀನು ಆದೇಶಗಳನ್ನು ಸುರಕ್ಷಿತವಾಗಿ ಜೈಲುಗಳಿಗೆ ತಲುಪಿಸುವ ವ್ಯವಸ್ಥೆಯನ್ನು ದೇಶಾದ್ಯಂತ ಶೀಘ್ರದಲ್ಲೇ ತರಲಾಗುತ್ತದೆ" ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಹೇಳಿದೆ.
ಈ ಯೋಜನೆಯ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ನೇತೃತ್ವದ ನ್ಯಾಯಪೀಠ ಸುಪ್ರೀಂ ಕೋರ್ಟ್ನ ಪ್ರಧಾ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ. "ಒಂದು ತಿಂಗಳೊಳಗೆ ಈ ಯೋಜನೆಯನ್ನು ಜಾರಿಗೊಳಿಸಬಹುದು" ಎಂದು ತಿಳಿಸಿದೆ.
"ಇದರಿಂದ ಕೈದಿಗಳ ಬಿಡುಗಡೆಗೊಳಿಸಲು ಅಧಿಕೃತ ಆದೇಶಕ್ಕಾಗಿ ಅಧಿಕಾರಿಗಳು ಕಾಯುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ" ಎಂದು ನ್ಯಾಯಾಲಯ ಹೇಳಿದೆ.
ಅಂತರ್ಜಾಲದ ವ್ಯವಸ್ಥೆ ಇಲ್ಲದ ಕಾರಣ ಡಿಜಿಟಲ್ ವ್ಯವಸ್ಥೆ ಮೂಲಕ ಜಾಮೀನು ಆದೇಶಗಳನ್ನು ಜೈಲುಗಳಿಗೆ ತಲುಪಿಸಲು ಸಾಧ್ಯವಿಲ್ಲದ ಕಾರಣ, ರಾಜ್ಯ ಸರ್ಕಾರಗಳು, ತಮ್ಮ ವ್ಯಾಪ್ತಿಯ ಜೈಲುಗಳಲ್ಲಿ ಅಂತರ್ಜಾಲ ಸಂಪರ್ಕದ ಲಭ್ಯತೆ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯ ಕೇಳಿದೆ.
ಈ ಯೋಜನೆಯನ್ನು ಅನುಷ್ಠಾನಗೊಳಿಸಲು ನೆರವಾಗುವುದಕ್ಕೆ ಸುಪ್ರೀಂ ಕೋರ್ಟ್ನ ಹೊರಿಯ ವಕೀಲ ದುಷ್ಯಂತ್ ದವೆ ಅವರನ್ನು ಅಮಿಕಸ್ ಕ್ಯೂರಿಯಾಗಿ ನ್ಯಾಯಪೀಠ ನೇಮಕ ಮಾಡಿದೆ.
ಸುಪ್ರೀಂ ಕೋರ್ಟ್ನಿಂದ ಜುಲೈ 8ರಂದು ಜಾಮೀನು ಪಡೆದ 13 ಕೈದಿಗಳ ಬಿಡುಗಡೆಗೆ ಉತ್ತರ ಪ್ರದೇಶದ ಅಧಿಕಾರಿಗಳು ವಿಳಂಬ ಮಾಡಿದ್ದರು. ನ್ಯಾಯಪೀಠವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸ್ವಯಂ ಪ್ರೇರಿತವಾಗಿ ಈ ನೂತನ ಯೋಜನೆಯನ್ನು ರೂಪಿಸಲು ಮುಂದಾಗಿದೆ.