ಬೆಂಗಳೂರು, ಜು 16 (DaijiworldNews/PY): "ನಟ ದರ್ಶನ್ ವಿರುದ್ಧ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಹೆಸರು ತಳುಕು ಹಾಕುವ ಕೆಲಸ ಮಾಡಬೇಡಿ. ಇಂದ್ರಜಿತ್ ಲಂಕೇಶ್ ಅವರು ಅನೇಕ ಬಾರಿ ನನ್ನನ್ನು ಭೇಟಿ ಮಾಡಿದ್ದು, ಸಂದರ್ಶನ ನಡೆಸಿದ್ದಾರೆ. ಆದರೆ, ನಾನು ಇತ್ತೀಚೆಗೆ ಇಂದ್ರಜಿತ್ ಲಂಕೇಶ್ ಅವರನ್ನು ಭೇಟಿಯಾಗಿಲ್ಲ" ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಇಂದ್ರಜಿತ್ ಲಂಕೇಶ್ ಮತ್ತು ಹೆಚ್.ಡಿ. ಕುಮಾರಸ್ವಾಮಿ ಫೋಟೋ ವೈರಸ್ ವಿಚಾರದ ಬಗ್ಗೆ ಮಾತನಾಡಿದ ಅವರು, "ಈ ಪ್ರಕರಣದಲ್ಲಿ ನನ್ನ ಹೆಸರನ್ನು ಏಕೆ ತರಲು ಯತ್ನಿಸುತ್ತಿದ್ದಾರೋ ನನಗೆ ತಿಳಿದಿಲ್ಲ. ನನಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ಇತ್ತೀಚೆಗೆ ನಾನು ಇಂದ್ರಜಿತ್ ಲಂಕೇಶ್ ಅವರನ್ನು ಭೇಟಿ ಮಾಡಿಲ್ಲ" ಎಂದು ಕಿಡಿಕಾರಿದ್ದಾರೆ.
"ನಾನು ಕದ್ದುಮುಚ್ಚಿ ರಾಜಕೀಯ ಮಾಡುವುದಿಲ್ಲ. ನೇರವಾಗಿ ರಾಜಕೀಯ ಮಾಡುತ್ತೇನೆ. ನನ್ನ ಹಾಗೇ ಮುಕ್ತವಾಗಿ ವಿಚಾರವನ್ನು ಪ್ರಸ್ತಾಪ ಮಾಡುವವರು ಈ ದೇಶದಲ್ಲಿ ಇಲ್ಲ. ಈ ಫೋಟೋ ಬಿಡುಗಡೆ ಹಿಂದಿನ ಉದ್ದೇಶ ಏನೆಂದು ನನಗೆ ತಿಳಿದಿಲ್ಲ. ಈ ಪ್ರಕರಣದಲ್ಲಿ ನನ್ನ ಹೆಸರು ತಳುಕು ಹಾಕುವ ಕೆಲಸ ಮಾಡಬೇಡಿ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನನ್ನನ್ನು ಪ್ರತಿನಿತ್ಯ ನೂರಾರು ಮಂದಿ ಭೇಟಿಯಾಗುತ್ತಾರೆ. ಯುವಕರು, ವಯಸ್ಸಾಗಿರೋರು ಫೋಟೋ ತೆಗೆದುಕೊಳ್ಳುತ್ತಾರೆ. ಆದರೆ, ಈ ಫೋಟೋ ಈಗ ಯಾರು ಉಪಯೋಗ ಮಾಡಿಕೊಳ್ಳಲು ಹೋಗುತ್ತಾರೆ ಎನ್ನುವುದನ್ನು ಇಂದ್ರಜಿತ್ ಲಂಕೇಶ್ ಅವರೇ ತಿಳಿಸಬೇಕು" ಎಂದಿದ್ದಾರೆ.
ಸ್ಯಾಂಡಲ್ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಗಂಭೀರ ಆರೋಪ ಮಾಡಿದ ವಿಚಾರ ಸುದ್ದಿಯಾಗುತ್ತಿದ್ದಂತೆ. ಇತ್ತ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಇಂದ್ರಜಿತ್ ಲಂಕೇಶ್ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.