ನವದೆಹಲಿ, ಜು.16 (DaijiworldNews/HR): ಶೋಭಾ ಕರಂದ್ಲಾಜೆ ಅವರು ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವರಾದ ಬಳಿಕ ಊರಿಗೆ ಹಿಂದಿರುಗದೇ ನಿರಂತರವಾಗಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದು, ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರಿ ಮಳೆಯ ಸುರಿಯುತ್ತಿರುವ ಹಿನ್ನಲೆಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ್ದಾರೆ.
ದೆಹಲಿಯ ಕಛೇರಿ ಕೃಷಿ ಭವನಕ್ಕೆ ತೆರಳಿ ವಿಡಿಯೋ ಕಾನ್ಫೆರನ್ಸ್ ಮೂಲಕ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶೋಭಾ ಕರಂದ್ಲಾಜೆ, ಮಳೆಯಿಂದ ಆಗಲಿರುವ ಪೃಕತಿ ವಿಕೋಪಗಳ ಕುರಿತು ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಚರ್ಚಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಇನ್ನು ಜುಲೈ 7ರಂದು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ ಜುಲೈ 8ರಂದು ಅಧಿಕಾರ ಸ್ವೀಕರಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೂಚನೆ ಮೇರೆಗೆ ಕ್ಷೇತ್ರಕ್ಕೂ ಹಿಂದಿರುಗದೆ ತಮ್ಮ ಇಲಾಖೆಯ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ.