ಬೀದರ್, ಜು 16 (DaijiworldNews/PY): ಮುಂದಿನ ಸಿಎಂ ಬಗ್ಗೆ ಕಾಂಗ್ರೆಸ್ನಲ್ಲಿ ಚರ್ಚೆ ನಡೆಯುತ್ತಿದೆ. ಈ ನಡುವೆ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, "ಸಿದ್ದರಾಮಯ್ಯ ಅವರಿಗೆ ಧಮ್ ಇದ್ದರೆ ಮುಂದಿನ ಸಿಎಂ ಮಲ್ಲಿಕಾರ್ಜುನ ಖರ್ಗೆ ಎಂದು ಘೋಷಣೆ ಮಾಡಲಿ" ಎಂದು ಸವಾಲ್ ಎಸೆದಿದ್ದಾರೆ.
ಬೀದರ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ಅವರು ಕೇವಲ ಚುನಾವಣೆಯ ಸಂದರ್ಭ ದಲಿತ ಸಿಎಂ ತಂತ್ರಗಾರಿಕೆಯನ್ನು ಬಳಸುತ್ತಿದ್ದಾರೆ. ಚುನಾವಣೆಯ ವೇಳೆ ದಲಿತ ಸಿಎಂಗೆ ತಮ್ಮ ಬೆಂಬಲ ಎಂದು ಹೇಳುತ್ತಿದ್ದಾರೆ. ಆದರೆ, ಚುನಾವಣೆಯಲ್ಲಿ ಪರಮೇಶ್ವರ್ ಅವರನ್ನು ಸೋಲಿಸಲು ಏನು ಬೇಕೋ ಅದನ್ನೆಲ್ಲಾ ಮಾಡಿದ್ದರು" ಎಂದು ದೂರಿದ್ದಾರೆ.
"ಚುನಾವಣೆಯ ವೇಳೆ ಕಾಂಗ್ರೆಸಿಗರು ಮತಬೇಟೆಗಾಗಿ ತಮಗೆ ಬೇಕಾದಂತೆ ತಂತ್ರಗಾರಿಕೆ ಮಾಡುತ್ತಾರೆ. ಚುನಾವಣೆಯಲ್ಲಿ ಬಹುಮತ ಬರುವವರೆಗೆ ಇವರು ಒಂದೊಂದು ನಾಟಕವಾಡುತ್ತಾರೆ. ಸದ್ಯ ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನಕ್ಕಾಗಿ ಒಳಜಗಳ ನಡೆಯುತ್ತಿದೆ. ಹಿಂದಿನ ಚುನಾವಣೆಯಲ್ಲಿ ದಲಿತ ಸಿಎಂಗೆ ತಮ್ಮ ಬೆಂಬಲ ಎಂದಿದ್ದ ಸಿದ್ದರಾಮಯ್ಯ ಅವರಿಗೆ ಧಮ್ ಇದ್ದರೆ ಮುಂದಿನ ಸಿಎಂ ಖರ್ಗೆ ಎಂದು ಘೋಷಿಸಲಿ" ಎಂದು ಸವಾಲು ಹಾಕಿದ್ದಾರೆ.