ಬೆಂಗಳೂರು, ಜು 16 (DaijiworldNews/MS): ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಆರೋಪ ಮಾಡಿರುವ ಇಂದ್ರಜಿತ್ ಲಂಕೇಶ್ ನಿವಾಸಕ್ಕೆ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ.
ದರ್ಶನ್ ವಿರುದ್ಧ ಹಲ್ಲೆ ಆರೋಪ ಹಿನ್ನೆಲೆಯಲ್ಲಿ ಕೋರಮಂಗಲದಲ್ಲಿರುವ ಇಂದ್ರಜಿತ್ ಲಂಕೇಶ್ ನಿವಾಸದ ಸುತ್ತ ಪೊಲೀಸರನ್ನು ನಿಯೋಜಿಸಲಾಗಿದೆ. ಅಭಿಮಾನಿಗಳ ಪ್ರತಿಭಟನೆ ಸೇರಿದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಇದಿಷ್ಟೇ ಅಲ್ಲದೆ ಇಂದ್ರಜಿತ್ ಮನೆಯ ಸುತ್ತಮುತ್ತ 2 ಹೊಯ್ಸಳ ವ್ಯಾನ್ ನಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.
ನಟ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅವರು ಕಳೆದ ಜೂನ್ ತಿಂಗಳಿನಲ್ಲಿ ಮೈಸೂರಿನ ಹೋಟೆಲ್ನಲ್ಲಿ ಗೋಪಾಲ್ ರಾಜ್ ಪಪ್ಪು ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ, ತೋಟದ ಮನೆಯ ವಾಚ್ಮ್ಯಾನ್ಗೆ ಹೊಡೆದಿದ್ದಾರೆ, ಗಂಗಾಧರ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪತ್ರಕರ್ತ / ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ್ದರು.
ಈ ನಡುವೆ ನಟ ದರ್ಶನ್ ಇದಕ್ಕೆ ಉತ್ತರವಾಗಿ ಇಂದು ಮಧ್ಯಾಹ್ನ ಪತ್ರಿಕಾಗೋಷ್ಟಿ ನಡೆಸಲಿದ್ದಾರೆ. ಇದಕ್ಕೆ ಮತ್ತೆ ಕೌಂಟರ್ ಕೊಟ್ಟು ಇಂದ್ರಜಿತ್ ಲಂಕೇಶ್ ಮಾದ್ಯಮಗೋಷ್ಟಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.