ಬೆಂಗಳೂರು, ಜು 16 (DaijiworldNews/PY): ದೆಹಲಿ ಭೇಟಿ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಖಾತರಿಪಡಿಸಿದ್ದು, "ನಮ್ಮ ಮುಂದೆ ಸಂಪುಟ ಪುನರ್ರಚನೆ ಬಗ್ಗೆ ಯಾವುದೇ ರೀತಿಯ ಪ್ರಸ್ತಾಪವಿಲ್ಲ" ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಶುಕ್ರವಾರ ದೆಹಲಿಗೆ ಹೋಗುತ್ತಿದ್ದೇನೆ. ಈ ವೇಳೆ ಪ್ರಧಾನಿಗಳು ಸೇರಿದಂತೆ ಕೇಂದ್ರದ ಅನೇಕ ಮಂತ್ರಿಗಳನ್ನು ಭೇಟಿ ಮಾಡಲಿದ್ದು, ರಾಜ್ಯದ ಅಭಿವೃದ್ಧಿಯ ನಿಟ್ಟಿನಲ್ಲಿ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸುತ್ತೇನೆ" ಎಂದು ತಿಳಿಸಿದ್ದಾರೆ.
"ಪ್ರಧಾನಿ ಅವರಿಗೆ, ರಾಜ್ಯದಲ್ಲಿ ಸ್ಥಗಿತವಾಗಿರುವ ನೀರಾವರಿ ಯೋಜನೆಗಳ ವಿಚಾರದ ಬಗ್ಗೆ ಮನವರಿಕೆ ಮಾಡುತ್ತೇನೆ. ಮೋದಿ ಅವರು ಕೂಡಾ ಭೇಟಿಯಾಗುವುದಾಗಿ ತಿಳಿಸಿದ್ದು, ಭೇಟಿ ಮಾಡಲು ಸಮಯ ಕೊಡಲಿದ್ದಾರೆ. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಶನಿವಾರ ರಾಜ್ಯಕ್ಕೆ ವಾಪಾಸ್ಸಾಗಲಿದ್ದೇನೆ" ಎಂದಿದ್ದಾರೆ.
"ನಮ್ಮ ಮುಂದೆ ಸಂಪುಟ ಪುನರ್ರಚನೆಯ ಪ್ರಸ್ತಾಪವಿಲ್ಲ. ಒಂದು ವೇಳೆ ಸಂಪುಟ ಪುನರ್ರಚನೆ ಬಗ್ಗೆ ದೆಹಲಿಯಲ್ಲಿ ಚರ್ಚೆಯಾದರೆ ನೋಡೋಣ" ಎಂದು ತಿಳಿಸಿದ್ದಾರೆ.