ಭೋಪಾಲ್, ಜು 16 (DaijiworldNews/PY): ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರು ಭೋಪಾಲ್ನಲ್ಲಿ ಬಾಸ್ಕೆಟ್ ಬಾಲ್ ಆಡುತ್ತಿರುವ ಹಾಗೂ ವಿವಾಹವೊಂದರಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ಅವರು ಮನೆಯಲ್ಲಿ ಕೊರೊನಾ ಲಸಿಕೆ ಪಡೆದುಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಪ್ರಗ್ಯಾ ಸಿಂಗ್ ಅವರು ಲಸಿಕೆ ಹಾಕಿಸಿಕೊಳ್ಳುತ್ತಿರುವ ವಿಡಿಯೋ ಪೋಸ್ಟ್ ಮಾಡಿರುವ ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ ನರೇಂದ್ರ ಸಲೂಜಾ ಅವರು, "ಪ್ರಧಾನಿ ಮೋದಿ ಸೇರಿದಂತೆ ಎಲ್ಲಾ ಬಿಜೆಪಿ ನಾಯಕರು ವ್ಯಾಕ್ಸಿನೇಷನ್ ಕೇಂದ್ರಕ್ಕ ತೆರಳಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ, ಬಿಜೆಪಿ ಸಂಸದರಿಗೆ ಏಕೆ ಈ ವಿನಾಯಿತಿ. ಯಾವ ಆಧಾರದ ಮೇಲೆ ಸಿಕ್ಕಿತು?" ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರು ಇತ್ತೀಚೆಗೆ ತೆಗೆದುಕೊಂಡ ಕೊರೊನಾ ಲಸಿಕೆ ಮೊದಲ ಡೋಸ್ ಇದಾಗಿದೆ ಎಂದು ವರದಿಗಳು ತಿಳಿಸಿವೆ.
ವ್ಯಾಕ್ಸಿನೇಷನ್ ಕೇಂದ್ರವನ್ನು ಹೊರತುಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ಕೊರೊನಾ ಲಸಿಕೆ ಪಡೆದುಕೊಳ್ಳಲು ಅವಕಾಶವಿಲ್ಲ. ಆದರೆ, ಕೆಲವು ಸೆಲೆಬ್ರಿಟಿಗಳು ನಿಯಮ ಉಲ್ಲಂಘಿಸಿ ಮನೆಯಲ್ಲಿ ವ್ಯಾಕ್ಸಿನೇಷನ್ ಕೇಂದ್ರವನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಕ್ರಿಕೆಟಿಗ ಕುಲದೀಪ್ ಯಾದವ್ ಅವರು ಕಾನ್ಪುರದ ಅತಿಥಿಗೃಹವೊಂದರಲ್ಲಿ ಲಸಿಕೆ ಪಡೆದಿದ್ದರು. ಗುಜರಾತಿ ಜಾನಪದ ಗಾಯಕಿ ಗೀತಾ ರಬಾರಿ ಅವರು ಮನೆಯಲ್ಲಿ ಲಸಿಕೆ ಪಡೆದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ವಿಚಾರಣೆಗೆ ಆದೇಶಿಸಲಾಗಿತ್ತು.