ಭೋಪಾಲ್, ಜು 16(DaijiworldNews/MS): ಬಾವಿಗೆ ಬಿದ್ದ8 ವರ್ಷದ ಬಾಲಕಿಯನ್ನು ರಕ್ಷಿಸುವ ಕಾರ್ಯಾಚರಣೆ ನೋಡಲು ನೆರೆದಿದ್ದ 40ಕ್ಕೂ ಹೆಚ್ಚು ಜನ ಜನರು ಬಾವಿಗೆ ಬಿದ್ದಿರುವ ದುರಂತ ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಗಂಜಬಸೋದಾ ತಹಸಿಲ್ ನ ಲಾಲ್ ಪಠಾರ್ ಗ್ರಾಮದಲ್ಲಿ ನಡೆದಿದೆ.
ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಈ ಹೃದಯವಿದ್ರಾವಕ ಘಟನೆ ನಡೆದಿದ್ದು, ಮಗುವನ್ನು ರಕ್ಷಿಸಲು ಸುತ್ತಲೂ ನೆರೆದಿದ್ದ ಭಾರಿ ಜನಸಮೂಹದ ಭಾರದಿಂದಾಗಿ ಬಾವಿಯ ತಡೆಗೋಡೆ ಕುಸಿದು 40ಕ್ಕೂ ಹೆಚ್ಚು ಜನ 40 ಅಡಿ ಆಳದ ಬಾವಿಗೆ ಬಿದ್ದಿದ್ದಾರೆ ಎಂದು ಅಂದಾಜಿಸಲಾಗಿದೆ.
ಘಟನೆ ನಡೆದ ಪ್ರದೇಶದಿಂದ ಈಗಾಗಲೇ ನಾಲ್ಕು ಜನರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ದುರಂತ ಸಂಭವಿಸಿ ಎಷ್ಟು ಜನ ಬಾವಿಯೊಳಗೆ ಬಿದ್ದರು ಎಂದು ಅಧಿಕೃತವಾಗಿ ಹೇಳಲು ಯಾವ ಅಧಿಕಾರಿಯೂ ಸಿದ್ಧರಿಲ್ಲ. ಒಂದು ಅಂದಾಜು ಪ್ರಕಾರ ಸುಮಾರು ಹನ್ನೆರಡಕ್ಕೂ ಹೆಚ್ಚು ಜನ ಬಾವಿಯೊಳಗೆ ಒಳಗೆ ಸಿಲುಕಿದ್ದು ಬದುಕುಳಿಯುವ ಸಾಧ್ಯತೆಗಳು ತೀರಾ ಕಡಿಮೆ ಎಂದು ವರದಿಯಾಗಿದೆ.
ಗ್ರಾಮದ ಇತರ ಜನರು ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದರೂ, ತಡರಾತ್ರಿ 1.30 ರವರೆಗೆ 19 ಜನರನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಗಿದೆ. ತಡರಾತ್ರಿಯವರೆಗೆ ಬಾವಿಯಿಂದ ನೀರನ್ನು ಹೊರತೆಗೆಯಲು ಪ್ರಯತ್ನಿಸಲಾಯಿತು. ಇದಲ್ಲದೆ ಜೆಸಿಬಿಯ ಸಹಾಯದಿಂದ ಬಾವಿಯ ಬಳಿ ಚರಂಡಿ ಅಗೆಯಲಾಗಿದೆ. ಸಚಿವ ವಿಶ್ವಸ್ ಸರಂಗ್ , ಆಯುಕ್ತ ಕವೀಂದ್ರ ಕಿಯಾವಾತ್ ಜೊತೆಗೆ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಸಾಯಿ ಮನೋಹರ್ ಸ್ಥಳದಲ್ಲಿದ್ದೂ ರಕ್ಷಣಾಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ಇನ್ನು ತಡರಾತ್ರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಸ್ ಕೈಲಾಶ್ ಸಾರಂಗ್, ಸುಮಾರು 23 ಜನರನ್ನು ರಕ್ಷಿಸಲಾಗಿದೆ, ಅವರಲ್ಲಿ 13 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸಾಯಿ ಮನೋಹರ್ " ಗ್ರಾಮಸ್ಥರು ಹೇಳಿರುವಂತೆ ಗುರುವಾರ ಸಂಜೆ ಆಟವಾಡುತ್ತಿದ್ದಾಗ ಬಾಲಕಿ ಬಾವಿಗೆ ಬಿದ್ದಿದ್ದು, ಆಕೆಯನ್ನು ರಕ್ಷಿಸಲು ಜನ ಮುಂದಾದರು. ಈ ವೇಳೆ ಸುದ್ದಿ ಹಳ್ಳಿಯಲ್ಲಿ ಹರಡಿ ಬಾವಿಯ ಸುತ್ತಲೂ ಭಾರಿ ಜನಸಮೂಹ ಜಮಾಯಿಸಿತು . ಬಾವಿಯೊಳಗಿನಿಂದ ಬಾಲಕಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಗೋಡೆ ಕುಸಿದು ಬಾವಿಗೆ ಬಿದ್ದರು" ಎಂದು ಹೇಳಿದ್ದಾರೆ.
"ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರಿಗೆ ನಾನು ಗೌರವ ಸಲ್ಲಿಸುತ್ತೇನೆ. ರಕ್ಷಣಾ ಕಾರ್ಯ ನಡೆಯುತ್ತಿದೆ" ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.