ಬೆಂಗಳೂರು, ಜು 15 (DaijiworldNews/PY): "ಬಿಜೆಪಿಗೆ ಡೋಂಗಿ ಪ್ರಚಾರದಲ್ಲಿರುವ ಕಾಳಜಿ ಲಸಿಕೆ ನೀಡುವಿಕೆಯಲ್ಲಿ ಇಲ್ಲದಿರುವುದು ನಾಡಿನ ದುರಂತ" ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯದಲ್ಲಿ ಮಳೆ ಆರ್ಭಟ ಜೋರಾಗಿದೆ, ಉತ್ತರ ಕರ್ನಾಟಕದಲ್ಲಿ ಪ್ರವಾಹ ಹಾಗೂ ಕೊಡಗಿನಲ್ಲಿ ಭೂಕುಸಿತದ ಭೀತಿ ಎದುರಾಗಿದೆ. 'ಎಮ್ಮೆಯ ಮೇಲೆ ಮಳೆ ಹೊಯ್ದಂತೆ' ಎಂಬಂತೆ ಹಿಂದಿನ ಘಟನೆಗಳಿಂದ ಪಾಠ ಕಲಿಯದೆ ಅಗತ್ಯ ಸಿದ್ಧತೆಯಿಲ್ಲದೆ ನಿದ್ರಿಸುತ್ತಿದೆ ಸರ್ಕಾರ. ಬಿಎಸ್ವೈ,ಅವರೇ ತಾವು ಪ್ರವಾಹ ಎದುರಿಸಲು ತಯಾರಾಗಲು ದುರಂತವೇ ಸಂಭವಿಸಬೇಕೆ? ಜನ ಸಾಯಬೇಕೆ? ಎಂದು ಪ್ರಶ್ನಿಸಿದೆ.
"ಡಬಲ್ ಇಂಜಿನ್ ಸರ್ಕಾರಗಳು, 25 ವೀರಾಧಿವೀರ ಸಂಸದರು!, 6 ಶೂರಾಧಿಶೂರ ಕೇಂದ್ರ ಸಚಿವರು! ಇಷ್ಟಿದ್ದೂ ಲಸಿಕೆ ಹಂಚಿಕೆಯಲ್ಲಿ ಒಕ್ಕೂಟ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ ಮುಂದುವರಿದಿದ್ದು ಏಕೆ? ಜಾಹೀರಾತಿನ ಬ್ಯಾನರ್ಗಳನ್ನ ಕೊಟ್ಟು ಕಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕೆ ಕೊಡಲು ಮರೆತರೆ ಬಿಜೆಪಿ!?" ಎಂದು ಕೇಳಿದೆ.
"ಆರಂಭದ ಲಸಿಕಾಕರಣಕ್ಕೆ ಹಿನ್ನೆಡೆಯಾಗುವುದು ಸಹಜ, ಆದರೆ ಲಸಿಕಾಕರಣ ಆರಂಭವಾಗಿ 7, 8 ತಿಂಗಳು ಕಳೆದರೂ ಪರಿಸ್ಥಿತಿ ಸುಧಾರಿಸದೆ ತೀವ್ರ ಕೊರತೆಯಾಗುತ್ತಿದೆ ಎಂದರೆ ಅದು ಸರ್ಕಾರದ ವೈಫಲ್ಯ ಹಾಗೂ ಲಸಿಕೆಗಳ ಖಾಸಗಿ ವ್ಯಾಪಾರಕ್ಕೆ ಸಹಕರಿಸಲು ಸರ್ಕಾರದ ಹುನ್ನಾರವೆಂಬುದು ಸ್ಪಷ್ಟ. ಎಷ್ಟಾದರೂ ಇದು ವ್ಯಾಪಾರಿಗಳ ಸರ್ಕಾರವಲ್ಲವೇ!?" ಎಂದು ಪ್ರಶ್ನಿಸಿದೆ.
"ಲಸಿಕೆ ಹಿನ್ನೆಡೆಗೆ ರಾಜ್ಯಗಳೇ ಹೊಣೆ ಎಂದು ಕೇಂದ್ರ ಆರೋಪಿಸಿದೆ, ಇದನ್ನು ರಾಜ್ಯ ಬಿಜೆಪಿ ಸರ್ಕಾರ ಒಪ್ಪುವುದೇ? 7, 8 ತಿಂಗಳು ಕಳೆದರೂ ಲಸಿಕೆ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳದ ಕೇಂದ್ರದ ಈ ಆರೋಪವು ಎಲ್ಕೆಜಿ ಮಕ್ಕಳು ಸಬೂಬು ಹೇಳಿದಂತೆ! ಒಟ್ಟಿನಲ್ಲಿ ಡಬಲ್ ಇಂಜಿನ್ಗಳೆರೆಡೂ ಕೆಟ್ಟು ನಿಂತಿವೆ!" ಎಂದು ಲೇವಡಿ ಮಾಡಿದೆ.
"50% ಲಸಿಕಾ ಕೇಂದ್ರಗಳು ಬಾಗಿಲು ಮುಚ್ಚಿವೆ, ಆರಂಭದಿಂದಲೂ ಲಸಿಕೆ ಕೊರತೆ ಇದ್ದರೂ ಕೇಂದ್ರವನ್ನ ಪ್ರಶ್ನಿಸುವ ಎದೆಗಾರಿಕೆ ರಾಜ್ಯ ಸರ್ಕಾರದಲ್ಲಿ ಒಬ್ಬರಿಗೂ ಇಲ್ಲ. ಮೋದಿ ಎದುರು ಬಿಜೆಪಿಗರ ಪುಕ್ಕಲತನಕ್ಕೆ ರಾಜ್ಯದ ಜನತೆ ಸಂಕಷ್ಟ ಎದುರಿಸುವಂತಾಗಿದೆ. ಲಸಿಕೆ ಬದಲು ಜನತೆಗೆ ಗಂಜಳ ನೀಡುವ ಯೋಜನೆ ಇದೆಯೇ ಬಿಜೆಪಿ!?" ಎಂದು ಕೇಳಿದೆ.
"ಕರೋನಾ 3ನೇ ಅಲೆ ಮಕ್ಕಳಿಗಷ್ಟೇ ಅಲ್ಲದೆ ಲಸಿಕೆ ಪಡೆಯದ ವಯಸ್ಕರರಿಗೂ ಅಪಾಯ ಎಂದು ತಜ್ಞರು ಎಚ್ಚರಿಸಿದ್ದಾರೆ. ಬೇಜವಾಬ್ದಾರಿ ಬಿಜೆಪಿ ಸರ್ಕಾರದಿಂದ ಮಕ್ಕಳ ಸುರಕ್ಷತೆಗೆ ಸಿದ್ಧತೆಯೂ ಇಲ್ಲ, ವಯಸ್ಕರರಿಗೆ ಲಸಿಕೆಯೂ ಇಲ್ಲ, ಬಿಜೆಪಿಯ ಈ ದುರಾಡಳಿತ ಮತ್ತೊಂದು ದುರಂತಕ್ಕೆ, ಅಪಾರ ಸಾವು, ನೋವಿಗೆ ಕಾರಣವಾಗಲಿದೆ" ಎಂದಿದೆ.
"ಲಸಿಕಾ ಕೇಂದ್ರಗಳಿಗೆ ಕೇವಲ ನೂರಿನ್ನೂರು ಲಸಿಕೆ ಪೂರೈಸಿ, ಲಸಿಕೆ ಪಡೆಯಿರಿ ಎಂದರೆ ಜನತೆ ಏನು ಮಾಡಬೇಕು? ವ್ಯಾಪಾರಿ ಮನೋಧರ್ಮದ ಬಿಜೆಪಿ ಸರ್ಕಾರ ಲಸಿಕೆ ನೀಡದೆ ಜನತೆಯನ್ನು ಸಾವಿನ ಮನೆಗೆ ಕಳಿಸಲು ಯೋಜಿಸಿದೆ. ಬಿಜೆಪಿಗೆ ಡೋಂಗಿ ಪ್ರಚಾರದಲ್ಲಿರುವ ಕಾಳಜಿ ಲಸಿಕೆ ನೀಡುವಿಕೆಯಲ್ಲಿ ಇಲ್ಲದಿರುವುದು ನಾಡಿನ ದುರಂತ" ಎಂದು ಟೀಕಿಸಿದೆ.
"ಲಸಿಕೆ ಪೂರೈಕೆ ಇಲ್ಲದ ಕಾರಣ ಲಸಿಕೆ ಪಡೆಯುವಂತೆ ಜನತೆಯನ್ನು ಉತ್ತೇಜಿಸಲೂ ಹಿಂದೇಟು ಹಾಕುವಂತಹ ಸ್ಥಿತಿಗೆ ಬಂದಿದ್ದಾರೆ ಅಧಿಕಾರಿಗಳು. ಪ್ರಧಾನಿ ಮೋದಿ ಅವರು 'ಸರ್ವರಿಗೂ ಉಚಿತ ಲಸಿಕೆ' ಎಂದು ಪುಟಗಟ್ಟಲೆ ಜಾಹಿರಾತು ಹಾಗೂ ಸಿಕ್ಕಸಿಕ್ಕಲ್ಲಿ ಬ್ಯಾನರ್ ಹಾಕಿದ್ದು ಜನರ ಹಾಗೂ ಕೋರ್ಟಿನ ಕಣ್ಣಿಗೆ ಮಣ್ಣೆರಚಲು ಮಾತ್ರ" ಎಂದು ಕಿಡಿಕಾರಿದೆ.