ಬೆಂಗಳೂರು, ಜು 15 (DaijiworldNews/PY): "ಜು.19 ರಿಂದ ಲೋಕಸಭಾ ಅಧಿವೇಶನ ಆರಂಭವಾಗಲಿದ್ದು, ಈ ಹಿನ್ನೆಲೆ 21-22 ರಂದು ಕೆಲವು ಶಾಸಕರು ದೆಹಲಿಗೆ ಹೋಗಬೇಕು ಎಂದು ತೀರ್ಮಾನ ಮಾಡಿದ್ದೇವೆ" ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿ ಎರಡು ವರ್ಷ ಆಗಿದೆ. ಅವರು ರಾಷ್ಟ್ರೀಯ ನಾಯಕರ ಸೂಚನೆಯಂತೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ರೇಣುಕಾಚಾರ್ಯ ಅವರಂತ ಒಬ್ಬಿಬ್ಬರಿಂದ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿಲ್ಲ. ಶಾಸಕಾಂಗ ಸಭೆಯಲ್ಲಿ ಎಲ್ಲಾ ಶಾಸಕರು ಆಯ್ಕೆ ಮಾಡಿದ್ದಾರೆ. ಬೆಂಗಳೂರು ಅಥವಾ ದೆಹಲಿಯಲ್ಲಿ ಕುಳಿತ ಲಾಬಿ ಮಾಡಿದರೆ ಸಾಧ್ಯವಿಲ್ಲ" ಎಂದು ವಿಪಕ್ಷಕ್ಕೆ ಎಚ್ಚರಿಸಿದ್ದಾರೆ.
"ಮುಖ್ಯಮಂತ್ರಿ ಬದಲಾಯಿಸಬೇಕು ಎಂದು ಹೇಳುವ ಹಕ್ಕು ಯಾರಿಗಿಲ್ಲ. ಸಿಎಂ ಬದಲಾವಣೆ ಅಧಿಕಾರ ಒಬ್ಬಿಬ್ಬರ ಕೈಯ್ಯಲಿಲ್ಲ. ಅಂತ ವ್ಯಕ್ತಿ ರಾಜ್ಯದ ಮುಂದೆ ವಿಲನ್ ಆಗುತ್ತಾರೆ" ಎಂದಿದ್ದಾರೆ.
"ಕೊರೊನಾ ಸಾಂಕ್ರಾಮಿಕದಿಂದ ಜನರನ್ನು ರಕ್ಷಿಸುವುದೇ ನಮ್ಮ ಜವಾಬ್ದಾರಿಯಾಗಿದೆ. ವಿನಾಕಾರಣ ರಾಜಕಾರಣ ಮಾಡಬಾರದು ಎಂದು ಪಕ್ಷದ ವರಿಷ್ಠರು ತಿಳಿಸಿದ್ದಾರೆ" ಎಂದು ಹೇಳಿದ್ದಾರೆ.
"ರಾಜ್ಯಕ್ಕೆ ಅರುಣ್ ಸಿಂಗ್ ಅವರು ಬಂದ ವೇಳೆ ಶಾಸಕರ ಸಹಿ ಸಂಗ್ರಹ ಮಾಡಬೇಕು ಎಂದಿದ್ದು ಸತ್ಯ. ಆದರೆ, ಸಿಎಂ ಹಾಗೂ ಅಧ್ಯಕ್ಷರು ಸಹಿ ಸಂಗ್ರಹ ಬೇಡ ಎಂದಿದ್ದರು. ಸಹಿ ಮಾಡಿಸಿಕೊಂಡಿದ್ದು ಸತ್ಯ ಹಾಗೂ ತೋರಿಸಿದ್ದು ಸತ್ಯ. ಆದರೆ, ಅದನ್ನು ಕೇಂದ್ರದ ವರಿಷ್ಠರಿಗೆ ನೀಡುತ್ತೇನೆ ಎಂದಿಲ್ಲ" ಎಂದಿದ್ದಾರೆ.