ಬೆಂಗಳೂರು, ಜು 15 (DaijiworldNews/PY): "ಮುಂದಿನ 5 ವರ್ಷಗಳಲ್ಲಿ 10 ಮಿಲಿಯನ್ ಉದ್ಯೋಗಾವಕಾಶ ಸೃಷ್ಟಿಸಲು ಉದ್ಯಮಶೀಲ ಕಾರ್ಯಪಡೆ ರಚಿಸಲಾಗಿದೆ. ಸದ್ಯದಲ್ಲೇ ಈ ಪಡೆ ವರದಿ ಸಲ್ಲಿಸಲಿದೆ" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ವಿಶ್ವ ಯುವ ಕೌಶಲ್ಯಾಭಿವೃದ್ದಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಯುವಕರಿಗೆ ಕೌಶಲಾಭಿವೃದ್ಧಿ ಹಾಗೂ ಜೀಬನ ಖಾತ್ರಿಪಡಿಸುವಲ್ಲಿ ನಮ್ಮ ಸರ್ಕಾರ ದಿಟ್ಟ ಹೆಜ್ಜೆಯನ್ನಿರಿಸಿದೆ. ದೇಶದ ಅಭಿವೃದ್ಧಿ ಯುವಜನ ಕೌಶಲ್ಯದ ಮಟ್ಟವನ್ನು ಆಧರಿಸಿದೆ" ಎಂದಿದ್ದಾರೆ.
"ನಮ್ಮ ಸರ್ಕಾರವು ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಸಹಾಯ ಹಸ್ತ ಚಾಚಿದೆ. ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ಸ್ಕಿಲ್ ಕನೆಕ್ಟ್ ಉದ್ಯೋಗ ಮೇಳವನ್ನು ನಡೆಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.
"ನಮ್ಮಲ್ಲಿ 18ರಿಂದ 35ರ ವಯೋಮಿತಿಯ ಮಾನವ ಸಂಪನ್ಮೂಲ ಬಹಳ ದೊಡ್ಡ ಮಟ್ಟದಲ್ಲಿದೆ. ದೇಶ ಹಾಗೂ ರಾಜ್ಯದ ಏಳಿಗೆಯಲ್ಲಿ ಯುವ ಶಕ್ತಿಯ ಕೊಡುಗೆ ಅಪಾರ. ಯುವಕರ ಕೌಶಲ್ಯ ಹೆಚ್ಚಿಸುವ ಸಲುವಾಗಿ ನಮ್ಮ ಸರ್ಕಾರ 2 ವರ್ಷದಲ್ಲಿ ಹಲವು ಕಾರ್ಯಕ್ರಮವನ್ನು ಕೈಗೊಂಡಿದೆ" ಎಂದಿದ್ದಾರೆ.
"150 ಐಟಿಐ ಕಾಲೇಜುಗಳನ್ನು ಉನ್ನತೀಕರಿಸಲಾಗಿದೆ. ಅತ್ಯಾಧುನಿಕ ಲ್ಯಾಬ್ ಸ್ಥಾಪನೆಗೆ ಸಾರ್ವಜನಿಕ ಸಹಭಾಗಿತ್ವದಲ್ಲಿ ಟಾಟಾ ಟೆಕ್ನಾಲಜೀಸ್ನೊಂದಿಗೆ ಒಡಂಬಡಿಗೆ ಸಹಿ ಹಾಕಲಾಗಿದೆ" ಎಂದು ಹೇಳಿದ್ದಾರೆ.