ಚಿತ್ರದುರ್ಗ, ಜು 15 (DaijiworldNews/PY): "ವಿಪಕ್ಷ ನಾಯಕ ಸಿದ್ದರಾಂಯ್ಯ ಅವರ ಆಡಳಿತಾವಧಿಯ ವೇಳೆ ಜನರಿಗೆ ವಂಚನೆ ಮಾಡಿದ್ದಾರೋ ಅಥವಾ ಇಲ್ಲವೋ ಎನ್ನುವ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಬ್ಲಿಕ್ ಡಿಬೇಟ್ಗೆ ಬರಲಿ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ಅವರು ಬಸವ ಜಯಂತಿ ದಿನದಂದು ಪ್ರಮಾಣ ವಚನ ಸ್ವೀಕರಿಸಿದ್ದು, ಅವರು ಸಿಎಂ ಆಗಿದ್ದ ವೇಳೆ ನುಡಿದಂತೆ ನಡೆದಿದ್ದಾರೆ. ಕೊಟ್ಟ ಮಾತಿಗೆ ತಪ್ಪಿಲ್ಲ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಶೇ.99ರಷ್ಟು ಕೆಲಸ ಮಾಡಿದ್ದಾರೆ. ಈ ಬಗ್ಗೆ ತಿಳಿದುಕೊಳ್ಳಲು ನಳಿನ್ ಕುಮಾರ್ ಕಟೀಲ್ ಅವರು ನೇರ ಚರ್ಚೆಗೆ ಬರಲಿ" ಎಂದಿದ್ದಾರೆ.
ರಾಜ್ಯ ಕಾಂಗ್ರೆಸ್ನಲ್ಲಿ ನಡಿಯುತ್ತಿರುವುದು ಮ್ಯಾಜಿಕ್ ಚೇರ್ ಆಟ ನಳಿನ್ ಹೇಳಿಕೆಗೆ ತಿರುಗೇಟು ನೀಡಿರುವ ಅವರು, "ಕಾಂಗ್ರೆಸ್ನಲ್ಲಿ ಮ್ಯಾಜಿಕ್ ಚೇರ್ ಆಟ ನಡೆಯುತ್ತಿದೆಯೋ ಅಥವಾ ಯಾವುದೋ ಆಟವೋ?. ಆದಕ್ಕೂ ಮುನ್ನ ಬಿಜೆಪಿಯಲ್ಲಿ ನಡೆಯುತ್ತಿರುವುದು ಯಾವ ಆಟ?. ಅದು ಯಾವ ಚೇರ್ ಆಟ ಎನ್ನುವುದನ್ನು ಕಟೀಲ್ ತಿಳಿಸಬೇಕು" ಎಂದು ವ್ಯಂಗ್ಯವಾಡಿದ್ದಾರೆ.
ಇಂಧನ ದರ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಬಂಡು ಸರ್ಕಾರ. ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ವಿರುದ್ದ ಈಗಾಗಲೇ ಕಾಂಗ್ರೆಸ್ ಧರಣಿ ನಡೆಸಿ ಪ್ರತಿಭಟನೆ ನಡೆಸಿದ್ದರೂ ಕೂಡಾ ಕೇಂದ್ರ ಬಿಜೆಪಿ ಸರ್ಕಾರ ತನ್ನ ಧೋರಣೆಯ ನೀತಿಯನ್ನು ಮತ್ತೆ ಅನುಸರಿಸಿದೆ. ಈ ವಿಚಾರದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಮುಂದಿನ ಹೋರಾಟ ರೂಪುರೇಷೆ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ" ಎಂದಿದ್ದಾರೆ.