ಉತ್ತರಾಖಂಡ್ , ಜು 15 (DaijiworldNews/MS): ಉತ್ತರಾಖಂಡ ಸಚಿವ ಸ್ವಾಮಿ ಯತಿಶ್ವರಾನಂದ್ ಅವರು ಮಾಸ್ಕ್ ಕಾಲಿನ ಹೆಬ್ಬೆರಳಿನಲ್ಲಿ ನೇತಾಡಿಸುತ್ತಿರುವ ಪೋಟೋ ವೈರಲ್ ಆಗಿದ್ದು ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.'
ರಾಜ್ಯದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರದ ಸಚಿವರೊಬ್ಬರು ಇತರ ಇಬ್ಬರು ಮಂತ್ರಿಗಳಾದ ಬಿಶನ್ ಸಿಂಗ್ ಚುಫಾಲ್ ಮತ್ತು ಸುಬೋಧ್ ಯುನಿಯಲ್ ಹಾಗೂ ಪಕ್ಷದ ಇತರ ನಾಯಕರೊಂದಿಗೆ ಒಳಾಂಗಣ ಸಭೆಯಲ್ಲಿ ಭಾಗವಹಿಸಿದ್ದು ಇದರಲ್ಲಿ ಯಾರೊಬ್ಬರು ಮಾಸ್ಕ್ ಧರಿಸಿರಲಿಲ್ಲ
ಸೋಷಿಯಲ್ ಮೀಡಿಯಾದಲ್ಲಿ ಈ ಪೋಟೋ ಪ್ರಚಾರ ಪಡೆದ ಬಳಿಕ ವಿರೋಧ ಪಕ್ಷದ ನಾಯಕರು ಎಚ್ಚೆತ್ತುಕೊಂಡು ಸರ್ಕಾರವನ್ನು ಟೀಕಿಸಲಾರಂಭಿಸಿದರು. ಸಚಿವರುಗಳೇ ಕೋವಿಡ್ ಪ್ರೋಟೋಕಾಲ್ ಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿ ಬಿಜೆಪಿ ನಾಯಕರನ್ನು ಮತ್ತು ರಾಜ್ಯ ಸರ್ಕಾರವನ್ನು ದೂಷಿಸಿದರು.
ಕ್ಯಾಬಿನೆಟ್ ಸಚಿವ ಸ್ವಾಮಿ ಯತಿಶ್ವರಾನಂದ್ ಅವರು ಮುಖವಾಡವನ್ನು ಕಾಲಿನಡಿಗೆ ಮಾಸ್ಕ್ ನೇತುಹಾಕಿರುವ ಛಾಯಾಚಿತ್ರವು , ಸಚಿವರು ಮತ್ತು ಅವರ ಸರ್ಕಾರವು ಕೋವಿಡ್ -19 ಮಾರ್ಗಸೂಚಿಗಳನ್ನು ತಮ್ಮ ಕಾಲುಗಳ ಕೆಳಗೆ ಇಟ್ಟಿರುವುದನ್ನು ತೋರಿಸುತ್ತದೆ" ಎಂದು ಹರಿದ್ವಾರದ ಕಾಂಗ್ರೆಸ್ ಶಾಸಕ ಖಾಜಿ ನಿಜಾಮುದ್ದೀನ್ ಆರೋಪಿಸಿದ್ದಾರೆ.
ಇನ್ನು ಕಾಂಗ್ರೆಸ್ ರಾಜ್ಯ ವಕ್ತಾರ ಗರಿಮಾ ದಾಸೌನಿ “ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೆ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಾಗ, ಉತ್ತರಾಖಂಡ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿರುವ ಸ್ವಾಮಿ ಯತಿಶ್ವರಾನಂದರು ತಮ್ಮ ಮುಖಗವಸು ಕಾಲಿಗೆ ನೇತು ಹಾಕಿ ಯಾವ ರೀತಿಯ ಸಂದೇಶವನ್ನು ಜನರಿಗೆ ತಲುಪಿಸುತ್ತಿದ್ದಾರೆ.
ಸಚಿವರಂತಹ ಜವಾಬ್ದಾರಿಯುತ ಹುದ್ದೆಯಲ್ಲಿರುವ ಜನರು ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ ಜನರು ತಮ್ಮನ್ನು ಅನುಸರಿಸುತ್ತಾರೆಂದು ಸರ್ಕಾರ ನಿರೀಕ್ಷಿಸುವುದು ವ್ಯರ್ಥ ಎಂದು ಹೇಳಿದ್ದಾರೆ.