ವಾರಾಣಸಿ, ಜು 15 (DaijiworldNews/PY): ಅಂತರಾಷ್ಟ್ರೀಯ ಸಹಕಾರ ಹಾಗೂ ಕೇಂದ್ರ ರುದ್ರಾಕ್ಷ ಸೇರಿದಂತೆ 1,500 ಕೋಟಿ ರೂ.ಮೌಲ್ಯದ ಯೋಜನೆಗಳಿಗೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ.
ಬನಾರಸ್ ಹಿಂದು ವಿಶ್ವವಿದ್ಯಾಲಯದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 100 ಬೆಡ್ಗಳಿರುವ ತಾಯಿ ಹಾಗೂ ಮಕ್ಕಳ ಆರೋಗ್ಯ ವಿಭಾಗ, ಬಹು ಹಂತದ ಪಾರ್ಕಿಂಗ್, ಹೆದ್ದಾರಿ ಅಭಿವೃದ್ಧಿ ಯೋಜನೆಗಳು ಹಾಗೂ ಪ್ರವಾಸೋದ್ಯಮದ ಯೋಜನೆಗಳು ಪ್ರಧಾನಿ ಮೋದಿ ಅವರು ಉದ್ಘಾಟಿಸಲಿರುವ ಯೋಜನೆಗಳಲ್ಲಿ ಸೇರಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ಜುಲೈ 15ರಂದು ನಾನು ಕಾಶಿಗೆ ಭೇಟಿ ನೀಡಲಿದ್ದು, 1,500 ಕೋಟಿ ರೂ.ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಲಿದ್ದೇನೆ. ಕಾಶಿ ಹಾಗೂ ಪೂರ್ವಾಂಚಲದ ಜನರ ಬದುಕು ಈ ಯೋಜನೆಗಳಿಂದ ಇನ್ನಷ್ಟು ಸುಲಭವಾಗಲಿದೆ" ಎಂದಿದ್ದಾರೆ.
"ಕಳೆದ ಕೆಲವು ವರ್ಷಗಳಲ್ಲಿ ಕೇಂದ್ರ ಹಾಗೂ ಯುಪಿ ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ಹಲವು ಕಾರ್ಯಗಳನ್ನು ಮಾಡಿವೆ. ಈ ಪ್ರಯತ್ನಗಳ ಭಾಗವಾಗಿ, ಬಿಎಚ್ಯುನಲ್ಲಿ 100 ಹಾಸಿಗೆಗಳ ಎಂಸಿಎಚ್ ವಿಭಾಗವನ್ನು ಉದ್ಘಾಟಿಸಲಾಗುವುದು. ಈ ಯೋಜನೆಯಿಂದ ಕಾಶಿ ಹಾಗೂ ಸುತ್ತಮುತ್ತಲಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಸುಲಭವಾಗಿ ತಲುಪುವಂತೆ ಮಾಡುತ್ತದೆ" ಎಂದಿದ್ದಾರೆ.
"ಗೊದೌಲಿಯಾದಲ್ಲಿ ಬಹು ಹಂತದ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಪ್ರವಾಸೋದ್ಯಮ ಅಭಿವೃದ್ದಿಗೆ ರೊ-ರೊ ವೆಸೆಲ್ಸ್, ವಾರಣಾಸಿ-ಘಾಜಿಪುರ್ ಹೆದ್ದಾರಿಯಲ್ಲಿ ಮೂರು ಲೇನ್ ಫ್ಲೈಓವರ್ ಬ್ರಿಡ್ಜ್ ಹಾಗೂ ಇತರ ಯೋಜನೆಗಳಿಗೆ ಚಾಲನೆ ನೀಡಲಾಗುವುದು" ಎಂದು ಹೇಳಿದ್ದಾರೆ.