ಬೆಂಗಳೂರು, ಜು 15 (DaijiworldNews/PY): ಬ್ಯಾಂಕ್ನಿಂದ ಸಾಲ ಕೊಡಿಸುವ ವಿಚಾರದಲ್ಲಿ ಸ್ಯಾಂಡಲ್ವುಡ್ ನಟ ದರ್ಶನ್ ಅವರಿಗೆ 25 ಕೋಟಿ ರೂ. ವಂಚನೆ ಮಾಡಲು ಯತ್ನಿಸಿದ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ.
ಇದೀಗ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಗಂಭೀರ ಆರೋಪ ಮಾಡಿದ್ದು, "ಮೈಸೂರಿನ ಹೊಟೇಲ್ನಲ್ಲಿ ಇತ್ತೀಚೆಗೆ ದರ್ಶನ್ ಹಾಗೂ ಅವರ ಗ್ಯಾಂಗ್ ಊಟದ ಪಾರ್ಟಿ ಮಾಡಿ, ಅಲ್ಲಿನ ಕೆಲಸಗಾರನ ಮೇಲೆ ಹಲ್ಲೆ ಮಾಡಿದ್ದಾರೆ" ಎಂದು ಹೇಳಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೈಸೂರು ಜಿಲ್ಲೆಯಲ್ಲು ಸೆಲೆಬ್ರಿಟಿಗಳ ನಡವಳಿಕೆ, ಭಾಷೆ ಮಿತಿಮೀರುತ್ತಿದೆ. ಜನಸಾಮಾನ್ಯರಿಗೆ ನ್ಯಾಯ ಸಿಗುತ್ತಿಲ್ಲ. ಪೊಲೀಸ್ ಠಾಣೆಗಳಲ್ಲಿ ಸೆಟ್ಲ್ಮೆಂಟ್ ಮೂಲಕ ಡೀಲ್ ನಡೆಯುತ್ತಿದೆ" ಎಂದು ದೂರಿದ್ದಾರೆ.
"ಮೈಸೂರಿನ ಸಂದೇಶ್ ನಾಗರಾಜ್ ಹೊಟೇಲ್ನಲ್ಲಿ ಗಲಾಟೆ ನಡೆದಿದ್ದು, ನಟ ದರ್ಶನ್ ಸೇರಿದಂತೆ ರಾಕೇಶ್, ಪಾಪಣ್ಣ ಅವರು ದಲಿತ ಕೆಲಸಗಾರನಿಗೆ ಹೊಡೆದಿದ್ದಾರೆ ಎನ್ನುವ ವರದಿ ನನ್ನ ಬಳಿ ಇದ್ದು, ಇದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಕೂಡಾ ನನ್ನ ಬಳಿ ಇದೆ. ಇದನ್ನು ಗೃಹ ಸಚಿವರಿಗೆ ತಲುಪಿಸಿದ್ದೇನೆ. ಹೊಟೇಲ್ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಡಿಲೀಟ್ ಮಾಡಲಾಗಿದೆ. ನಂತರ ಕೆಲಸಗಾರನಿಗೆ ಸೆಟ್ಲ್ಮೆಂಟ್ ಮಾಡಿ ಕಳುಹಿಸಿದ್ದಾರೆ. ದರ್ಶನ್ ಅವರು ಹೊಟೇಲ್ ಕೆಲಸಗಾರನ ಮೇಲೆ ಹಲ್ಲೆ ಮಾಡಿಲ್ಲ ಎಂದು ರಾಘವೇಂದ್ರ ದೇವರ ಮೇಲೆ ಆಣೆ ಮಾಡಿ ಹೇಳಲಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರನ್ನು ಭೇಟಿ ಮಾಡಿದ್ದು, ಈ ಬಗ್ಗೆ ತನಿಖೆ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ" ಎಂದು ತಿಳಿಸಿದ್ದಾರೆ.