ಬೆಂಗಳೂರು, ಜು 15 (DaijiworldNews/MS) : ಜುಲೈ19 ಮತ್ತು 22 ರಂದು ಎಸೆಸೆಲ್ಸಿ ಪರೀಕ್ಷೆ ನಿಗದಿಯಾಗಿದ್ದು, ಶುಲ್ಕ ಪಾವತಿಸದ ಕಾರಣ ಪರೀಕ್ಷೆಗೆ ಹಾಜರಾಗಲು ಯಾವುದೇ ವಿದ್ಯಾರ್ಥಿಗೆ ಪ್ರವೇಶ ಪತ್ರ ಅಥವಾ ಹಾಲ್ ಟಿಕೆಟ್ ನಿರಾಕರಿಸಬಾರದೆಂದು ಪ್ರಾಥಮಿಕ ಮತ್ತ ಪ್ರೌಢ ಶಿಕ್ಷಣ ಇಲಾಖೆ ಸಚಿವ ಎಸ್.ಸುರೇಶ್ ಕುಮಾರ್ ಬುಧವಾರ ಹೇಳಿದ್ದಾರೆ.
ಎಸೆಸೆಲ್ಸಿ ಸಚಿವ ಸುರೇಶ್ ಕುಮಾರ್ ಅವರು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ನಿರ್ದೇಶಕರ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿ , "ವಿದ್ಯಾರ್ಥಿಗಳು ಹಾಲ್ ಟಿಕೆಟ್ ಪಡೆಯಲು ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ನಮಗೆ ವರದಿಯಾಗಿಲ್ಲ. ಆದರೆ ಪೂರ್ಣ ಶುಲ್ಕ ಪಾವತಿಸದಿದ್ದರೆ ಹಾಲ್ ಟಿಕೆಟ್ ನೀಡಲಾಗುತ್ತಿಲ್ಲ ಎಂಬ ವರದಿ ಕೇಳಿಬಂದ ಹಿನ್ನೆಲೆಯಲ್ಲಿ, ಪರೀಕ್ಷೆಗಳಿಗೆ ನೊಂದಾಯಿಸಿಕೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡುವಂತೆ ಬಿಇಒ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಶುಲ್ಕ ಪಾವತಿಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಯಾವುದೇ ವಿದ್ಯಾರ್ಥಿಗೆ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ನಿರಾಕರಿಸಲಾಗುವುದಿಲ್ಲ ಎಂದು ಕರ್ನಾಟಕ ಮಾಧ್ಯಮಿಕ ಶಿಕ್ಷಣ ಪರೀಕ್ಷಾ ಮಂಡಳಿಯ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.
ಅದಾಗ್ಯೂ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಪಡೆಯಲು ತೊಂದರೆ ಕಂಡುಬಂದರೆ ಪೋಷಕರು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯನ್ನು ಸಂಪರ್ಕಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಪರೀಕ್ಷೆ ಕುರಿತು ಮಾತನಾಡಿ ಶೇ 100ರಷ್ಟು ಪರೀಕ್ಷಾ ಸಿಬ್ಬಂದಿ ವಾಕ್ಸಿನ್ ಪಡೆದಿದ್ದಾರೆ. ಪರೀಕ್ಷೆಗೆ ಮೊದಲು ಮತ್ತು ಬಳಿಕ ಪರೀಕ್ಷಾ ಕೇಂದ್ರದ ಆವರಣ ಮತ್ತು ಪರೀಕ್ಷಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲು ಸ್ಥಳೀಯ ಸಂಸ್ಥೆಗಳಿಗೆ ಈಗಾಗಲೇ ಆದೇಶಿಸಲಾಗಿದೆ . ಪರೀಕ್ಷೆಗೆ ಎರಡು ದಿನಗಳ ಮೊದಲು ಈ ಪ್ರಕ್ರಿಯೆಗೆ ನೇಮಕಗೊಂಡಿರುವ ಅಧಿಕಾರಿಗಳು, ಆರೋಗ್ಯ ಸಿಬ್ಬಂದಿ, ಸ್ಕೌಟ್ಸ್-ಗೈಡ್ಸ್ ಸ್ವಯಂಸೇವಕರು ಪರೀಕ್ಷಾ ಕೇಂದ್ರದಲ್ಲಿ ಅಣಕು ಪರೀಕ್ಷಾ ತಯಾರಿ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.