ಚೆನ್ನೈ, ಜು. 14 (DaijiworldNews/SM): ಮುಂದಿನ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವುದೇ ಗುರಿಯಾಗಿದೆ ಎಂದು ತಮಿಳುನಾಡಿನ ನಿಯೋಜಿತ ರಾಜ್ಯಾಧ್ಯಕ್ಷ ಅಣ್ಣಾಮಲೈ ತಿಳಿಸಿದ್ದಾರೆ.
ಬಿಜೆಪಿ ಹೈಕಮಾಂಡ್ ಈಗಾಗಲೇ ಮಾಜಿ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ನೀಡಿದೆ. ಶುಕ್ರವಾರದಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಣ್ಣಾಮಲೈ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಧಿಕಾರ ವಹಿಸಿಕೊಳ್ಳುವ ಮುನ್ನ ಕೊಯಮತ್ತೂರಿನಿಂದ ಚೆನ್ನೈಗೆ ಮೂರು ದಿನಗಳ ಸುದೀರ್ಘ ರಸ್ತೆ ಪ್ರಯಾಣ ಹಮ್ಮಿಕೊಂಡಿದ್ದಾರೆ.
ಬುಧವಾರ ಕೊಯಮತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ಬಿಜೆಪಿಯ ಹಲವು ಯೋಜನೆಗಳನ್ನು ಹಂಚಿಕೊಂಡಿದ್ದಾರೆ. "2026ರಲ್ಲಿ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬರುವುದು ಬಿಜೆಪಿಯ ಗುರಿಯಾಗಿದೆ. 2026ರಲ್ಲಿ ವಿಧಾನಸಭೆಗೆ 150 ಶಾಸಕರು ಪ್ರವೇಶಿಸಲಿದ್ದಾರೆ. ತಮಿಳುನಾಡಿನಲ್ಲೂ ಬಿಜೆಪಿ ಪಕ್ಷ ಅಧಿಕಾರ ನಡೆಸಬೇಕೆನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.