ಮೈಸೂರು, ಜು 14 (DaijiworldNews/PY): "ರಾಜಕೀಯ ಮುಖಂಡರು ಕೆಆರ್ಎಸ್ ಅಣೆಕಟ್ಟು ವಿಚಾರದಲ್ಲಿ ವೈಯುಕ್ತಿಕವಾಗಿ ಮಾತನಾಡುವುದು ಸೂಕ್ತವಲ್ಲ. ಅಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳನ್ನು ಸರ್ಕಾರ ಗಮನಿಸುತ್ತಿದ್ದು ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತವಾದ ಕ್ರಮ ತೆಗೆದುಕೊಳ್ಳಲಿದೆ" ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮೈಸೂರಿನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಅಣೆಕಟ್ಟು ಬಿರುಕು ಬಿಟ್ಟಿಲ್ಲ ಎಂದು ಈಗಾಗಲೇ ತಜ್ಷರು ವರದಿ ಕೊಟ್ಟಿದ್ದಾರೆ. ಅವರ ಮಾತನ್ನು ನಂಬಲೇಬೇಕು. ಆದರೂ, ಕೆಆರ್ಎಸ್ ಬಿರುಕಿನ ವಿಚಾರದ ಬಗ್ಗೆ ಮತ್ತೆ ಚರ್ಚೆಗೆ ಬರುತ್ತಿದೆ. ಇದರಿಂದ ಕೆಳಭಾಗದಲ್ಲಿ ವಾಸಿಸುತ್ತಿರುವ ಜನರು ಹಾಗೂ ರೈತರಿಗೆ ಆತಂಕವಾಗಿದೆ" ಎಂದಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಕಂದಾಯ ಸಚಿವ ಆರ್. ಅಶೋಕ್, "ಕೆಆರ್ಎಸ್ ಅಣೆಕಟ್ಟೆಯಲ್ಲಿ ಬಿರುಕು ಬಿಟ್ಟಿದೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಸಲು ತಜ್ಞರ ತಂಡವನ್ನು ಕಳುಹಿಸಲಾಗುತ್ತದೆ" ಎಂದು ಹೇಳಿದ್ದಾರೆ.
"ಮಂಡ್ಯಕ್ಕೆ ನಾನು ಭೇಟಿ ಕೊಡಲಿದ್ದು, ಈ ಬಗ್ಗೆ ಅಲ್ಲಿನ ಜಿಲ್ಲಾಧಿಕಾರಿಯೊಂದಿಗೆ ನಾನು ಚರ್ಚೆ ನಡೆಸುತ್ತೇನೆ. ಜಿಲ್ಲಾಧಿಕಾರಿ ನೇತೃತ್ವದ ತಜ್ಞರ ತಂಡವನ್ನು ಇಡೀ ಅಣೆಕಟ್ಟೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡುತ್ತೇನೆ" ಎಂದಿದ್ದಾರೆ.
"ಈ ಸರ್ಕಾರ ಯಾವುದೇ ಅಕ್ರಮ ಗಣಿಗಾರಿಕೆಗೆ ಅವಕಾಶ ನಿಡುವುದಿಲ್ಲ. ರಾಜ್ಯದಲ್ಲಿ ಅನುಮತಿ ಪಡೆದಿರುವ ಗಣಿಗಾರಿಕೆಗೆ ಮಾತ್ರವೇ ನಡೆಯಲಿದೆ. ಗಣಿಗಾರಿಕೆ ನಡೆಸುತ್ತಿರುವವರು ಯಾರೇ ಆದರೂ ಕೂಡಾ ನಾವು ನಿಲ್ಲಿಸುತ್ತೇವೆ" ಎಂದು ಹೇಳಿದ್ದಾರೆ.