ನವದೆಹಲಿ, ಜು 14 (DaijiworldNews/PY): ಪೂರ್ವ ಲಡಾಖ್ನಲ್ಲಿ ಚೀನಾ-ಭಾರತ ಸೇನಾಪಡೆಗಳ ನಡುವೆ ಘರ್ಷಣೆ ನಡೆದಿದೆ ಎನ್ನುವ ಮಾಧ್ಯಮಗಳ ವರದಿಯನ್ನು ಭಾರತೀಯ ಸೇನಾಪಡೆ ತಳ್ಳಿಹಾಕಿದರೂ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈ ಸಂಘರ್ಷ ನಡೆದಿದೆ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಪೂರ್ವ ಲಡಾಖ್ನಲ್ಲಿ ಚೀನಾದ ಮಿಲಿಟರಿ ಮತ್ತೆ ಹಲವಾರು ಕಡೆಗಳಲ್ಲಿ ವಾಸ್ತವ ನಿಯಂತ್ರಣ ರೇಖೆಯನ್ನು ದಾಟಿದೆ ಹಾಗೂ ಎರಡೂ ಕಡೆಯ ನಡುವೆ ಕನಿಷ್ಠ ಒಂದು ಘರ್ಷಣೆ ನಡೆದಿದೆ ಎಂದು ಹೇಳಿರುವ ಮಾಧ್ಯಮ ವರದಿಯನ್ನು ಅವರು ಉಲ್ಲೇಖಿಸಿದ್ದು, ಕೇಂದ್ರ ಸರ್ಕಾರವು, ವಿದೇಶಿ ಹಾಗೂ ರಕ್ಷಣಾ ನೀತಿಯನ್ನು ರಾಜಕೀಯ ಗಿಮಿಕ್ ಆಗಿ ಬಳಸಿಕೊಳ್ಳುತ್ತಿದ್ದು, ಇದು ನಮ್ಮ ದೇಶವನ್ನು ದುರ್ಬಲಗೊಳಿಸಿದೆ. ಭಾರತದ ಎಂದಿಗೂ ಇಷ್ಟು ದುರ್ಬಲವಾಗಿರಲಿಲ್ಲ" ಎಂದಿದ್ದಾರೆ.
"ಫೆಬ್ರವರಿಯಲ್ಲಿ ಪೂರ್ವ ಲಡಾಖ್ನಲ್ಲಿರುವ ಪ್ರದೇಶಗಳನ್ನು ಆಕ್ರಮಿಸಲು ಭಾರತೀಯ ಅಥವಾ ಚೀನಾದ ಕಡೆಯಿಂದ ಯಾವುದೇ ರೀತಿಯ ಪ್ರಯತ್ನ ನಡೆದಿಲ್ಲ. ಈ ಪ್ರದೇಶದಲ್ಲಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸಲು ಎರಡೂ ಕಡೆಯವರೂ ಮಾತುಕತೆ ನಡೆಸುತ್ತಿದ್ದಾರೆ" ಎಂದು ಭಾರತೀಯ ಸೇನೆ ತಿಳಿಸಿದೆ.
"ವರದಿಯಲ್ಲಿ ಉಲ್ಲೇಖವಾಗಿರುವಂತೆ ಗಾಲ್ವಾನ್ ಅಥವಾ ಯಾವುದೇ ಪ್ರದೇಶಲ್ಲಿ ಯಾವುದೇ ಘರ್ಷಣೆಗಳು ನಡೆದಿಲ್ಲ. ಅಲ್ಲದೇ, ಚೀನಾದೊಂದಿಗಿನ ಒಪ್ಪಂದ ಕೂಡಾ ಮುರಿದುಬಿದ್ದಿದೆ ಎನ್ನುವ ಅಂಶ ಕೂಡಾ ಸುಳ್ಳು" ಎಂದು ಸೇನೆ ಹೇಳಿದೆ.
"ಎರಡೂ ರಾಷ್ಟ್ರಗಳ ಯೋಧರು ತಮ್ಮ ತಮ್ಮ ಪ್ರದೇಶಗಳಲ್ಲಿ ಗಸ್ತು ತಿರುಗುವುದು ಮುಂದುವರಿದಿದೆ. ಚೀನಾದ ಚಲನೆವಲನೆ ಹಾಗೂ ಎಲ್ಲಾ ಚಟುವಟಿಕೆಗಳ ಮೆಲೆ ನಿಗಾ ಇಡಲಾಗಿದೆ" ಎಂದು ಸೇನೆ ತಿಳಿಸಿದೆ.