ಶ್ರೀನಗರ, ಜು 14 (DaijiworldNews/PY): ಜಮ್ಮು-ಕಾಶ್ಮೀರದ ಅರ್ನಿಯಾ ಸೆಕ್ಟರ್ನ ಅಂತರಾಷ್ಟ್ರೀಯ ಗಡಿ ಬಳಿ ಡ್ರೋನ್ ಪತ್ತೆಯಾಗಿದ್ದು, ಬಿಎಸ್ಎಫ್ ಪಡೆಗಳು ಡ್ರೋನ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಾತಿನಿಧಿಕ ಚಿತ್ರ
"ಅರ್ನಿಯಾ ಸೆಕ್ಟರ್ನಲ್ಲಿ ಜುಲೈ 13ರಂದು 9.52ರ ಸುಮಾರಿಗೆ ಕೆಂಪು ಬಣ್ಣದ ದೀಪವನ್ನು ಸೇನಾ ಯೋಧರು ಗಮನಿಸಿದರು. ಈ ವೇಳೆ ತಕ್ಷಣವೇ ಎಚ್ಚೆತ್ತುಕೊಂಡ ಯೋಧರು ಕೆಂಪು ಬಣ್ಣದ ದೀಪ ಇರುವ ಕಡೆಗೆ ಗುಂಡಿ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿ ನಡೆಸಿದ ಸಂದರ್ಭ ಕೆಂಪು ದೀಪ ಹಿಮ್ಮುಖವಾಗಿ ಚಲಿಸಿದ್ದು, ಆ ಪ್ರದೇಶದಲ್ಲಿ ಶೋಧ ಕಾರ್ಯ ಕೈಕೊಳ್ಳಲಾಗಿದೆ. ಆದರೆ, ಇಲ್ಲಿವರೆಗೂ ಡ್ರೋನ್ ಪತ್ತೆಯಾಗಿಲ್ಲ" ಎಂದು ಬಿಎಸ್ಎಫ್ ತಿಳಿಸಿದೆ.
ಭಾರತೀಯ ವಾಯುಸೇನೆ ನಿಯಂತ್ರಣದಲ್ಲಿರುವ ಜಮ್ಮು ವಿಮಾನ ನಿಲ್ದಾಣದಲ್ಲಿ ಜೂನ್ 27ರಂದು ಡ್ರೋನ್ ದಾಳಿ ನಡೆಸಲಾಗಿತ್ತು. ಮುಂಜಾಜೆಯ ಸಂದರ್ಭ ಐದು ನಿಮಿಷಗಳ ಅಂತರದಲ್ಲಿ ಎರಡು ಸ್ಪೋಟ ಸಂಭವಿಸಿದ್ದು, ಪರಿಣಾಮ ಇಬ್ಬರು ಭಾರತೀಯ ಸೇನಾ ಪಡೆಯ ಸಿಬ್ಬಂದಿಗಳು ಗಾಯಗೊಂಡಿದ್ದರು.
"ಭಾರತೀಯ ವಾಯುಸೇನೆ ನಿಯಂತ್ರಣದಲ್ಲಿರುವ ಜಮ್ಮು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಎರಡೂ ಲಘುಸ್ಪೋಟಗಳು ಉಗ್ರ ದಾಳಿಯಾಗಿದೆ" ಎಂದು ಜಮ್ಮು-ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.