ಬೆಂಗಳೂರು, ಜು 12 (DaijiworldNews/PY): "2020-21ರ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ತಿರಸ್ಕರಿಸುವ ಮೂಲಕ ರಾಜ್ಯ ಸರ್ಕಾರದ ತೀರ್ಮಾನವನ್ನು ಪುರಸ್ಕರಿಸಿದ್ದು, ರಾಜ್ಯದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷ ಇಲಾಖೆಗೆ ಭರವಸೆ ಮೂಡಿಸಿದೆ" ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
"ಪ್ರಸ್ತುತ ವರ್ಷ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಪರೀಕ್ಷೆಗೆ ಸಂಬಂಧಪಟ್ಟಂತೆ ಕೈಗೊಂಡಿರುವ ಸರಳೀಕೃತ ಪರೀಕ್ಷಾ ವ್ಯವಸ್ಥೆ ಹಾಗೂ ರಾಜ್ಯ ಆರೋಗ್ಯ ಇಲಾಖೆ ರೂಪಿಸಿದ ಎಸ್ಒಪಿ ಪಾಲನೆಗಳ ರೀತಿಯ ಉಪಕ್ರಮಗಳ ಬಗ್ಗೆ ಸರ್ಕಾರದ ವೈಜ್ಞಾನಿಕ ಆಲೋಚನೆಗಳನ್ನು ಪುರಸ್ಕರಿಸಿದೆ. ಇದು ಇಡೀ ರಾಷ್ಟ್ರಕ್ಕೆ ಮಾದರಿಯಾದ ಉಪಕ್ರಮವಾಗಿದೆ" ಎಂದಿದ್ದಾರೆ.
"ಮಕ್ಕಳ ಭವಿಷ್ಯದ ಹಿತದೃಷ್ಟಿಯ ನಿಟ್ಟಿನಲ್ಲಿ ಹೈಕೋರ್ಟ್ ಸಕಾಲಿಕವಾದ ತೀರ್ಮಾನವನ್ನು ತೆಗೆದುಕೊಂಡಿದೆ. ಹೈಕೋರ್ಟ್ನ ತೀರ್ಮಾನದಿಂದ ಸರ್ಕಾರದ ಕ್ರಮಕ್ಕೆ ಬಲ ಬಂದಂತಾಗಿದೆ" ಎಂದು ಹೇಳಿದ್ದಾರೆ.
2020-21ರ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯೂ ಅಬಾಧಿತವಾಗಿ ನಡೆಯಲಿದ್ದು ಪರೀಕ್ಷೆ ರದ್ದಿಗಾಗಿ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ರಾಜ್ಯ ಸರ್ಕಾರದ ನಿರ್ಧಾರವನ್ನು ಸೋಮವಾರ ಎತ್ತಿಹಿಡಿದಿದೆ.