ಬೆಂಗಳೂರು, ಜು 12 (DaijiworldNews/MS): 2020-21ರ ಶೈಕ್ಷಣಿಕ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯೂ ಅಬಾಧಿತವಾಗಿ ನಡೆಯಲಿದ್ದು ಪರೀಕ್ಷೆ ರದ್ದಿಗಾಗಿ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ರಾಜ್ಯ ಸರ್ಕಾರದ ನಿರ್ಧಾರವನ್ನು ಸೋಮವಾರ ಎತ್ತಿಹಿಡಿದಿದೆ.
ರಾಜ್ಯದಲ್ಲಿ ಜುಲೈ 19 ಮತ್ತು 22ಕ್ಕೆ ನಡೆಯಲಿರುವ ಎಸ್ಎಸ್ಎಲ್ಸಿ ಪರೀಕ್ಷೆಯನ್ನೂ ಕೊರೊನಾ ಕಾರಣದಿಂದ ರದ್ದುಗೊಳಿಸುವಂತೆ ಕೋರಿ ಎಸ್ವಿ ಸಿಂಗ್ರೇ ಗೌಡ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಹಂಚಾಟೆ ಸಂಜೀವ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ವಜಾಗೊಳಿಸಿದೆ.
ಪರೀಕ್ಷೆಯನ್ನು ನಡೆಸುವ ಸರ್ಕಾರದ ನಿರ್ಧಾರ ಮನಸೋಇಚ್ಛೆ ಕೈಗೊಂಡಿರುವುದಾಗಿ ನಮಗೆ ಕಾಣುತ್ತಿಲ್ಲ. ನ್ಯಾಯಾಲಯವನ್ನು ನೀಡಿರುವ ಎಸ್ಒಪಿಯನ್ನು ಅನುಸರಿಸಲಾಗಿದೆ. ರಾಜ್ಯ ಸರ್ಕಾರವು ಎಸ್ಒಪಿಯ ಸುತ್ತೋಲೆಯನ್ನು ಹೊರಡಿಸುವ ಮೂಲಕ ಪರೀಕ್ಷೆಯನ್ನು ನಡೆಸಲು ಅಗತ್ಯ ಕ್ರಮ ಕೈಗೊಂಡಿದೆ ಎಂದು ನ್ಯಾಯಾಲಯ ಇದೇ ವೇಳೆ ಅಭಿಪ್ರಾಯಪಟ್ಟಿದೆ. ಅಲ್ಲದೇ ನೀವೇಕೆ ನಿಮ್ಮ ಅರ್ಜಿಯ ಬಗ್ಗೆ ಪ್ರಚಾರ ಮಾಡಿದಿರಿ? ಎಂದು ಪ್ರಶ್ನಿಸಿದ ನ್ಯಾಯಪೀಠ ಅರ್ಜಿಯನ್ನು ಪ್ರಚಾರ ಮಾಡಬಾರದಿತ್ತು ಎಂದು ಕಿವಿಮಾತು ಹೇಳಿದೆ.
ಎರಡು ದಿನಗಳ ಅವಧಿಯಲ್ಲಿ ಪರೀಕ್ಷೆಗಳು ನಡೆಯಲಿದ್ದು, ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುವುದು ಎಂದು ರಾಜ್ಯದ ಪರ ಹಾಜರಾದ ಅಡ್ವೊಕೇಟ್ ಜನರಲ್ (ಎಜಿ) ನ್ಯಾಯಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿದ್ದರು. ಈ ವೇಳೆ ನ್ಯಾಯಾಲಯವು ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಒಲವು ತೋರುತ್ತಿಲ್ಲ. ಇದು ಪರೀಕ್ಷೆ ನಡೆಸಲು ಸಕಾಲ. ಕಚೇರಿಗಳು, ಕೋರ್ಟ್ಗಳು ಆರಂಭವಾಗಿವೆ. ಸದ್ಯ ಪ್ರಕರಣದಲ್ಲಿ ಅರ್ಹತೆಯನ್ನು ನಾವು ಕಾಣುತ್ತಿಲ್ಲ. ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಎಲ್ಲಾ ಮಧ್ಯಸ್ಥಗಾರರಿಂದ ಪಾಲಿಸಬೇಕಾದ ಎಸ್ಒಪಿ ಅನ್ನು ಸುತ್ತೋಲೆ ರೂಪದಲ್ಲಿ ನೀಡುವ ಮೂಲಕ ಪರೀಕ್ಷೆಯನ್ನು ನಡೆಸಲು ರಾಜ್ಯವು ಕಾಳಜಿ ವಹಿಸಿದೆ ಎಂದು ನಾವು ಕಂಡುಕೊಂಡಿದ್ದೇವೆ. ಅರ್ಜಿಯಲ್ಲಿ ನಮಗೆ ಯಾವ ಗಮನಾರ್ಹ ಅಂಶಗಳು ಕಂಡುಬಂದಿಲ್ಲ.. ಆದ್ದರಿಂದ, ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ನ್ಯಾಯಾಲಯ ಹೇಳಿದೆ.