ಹುಬ್ಬಳ್ಳಿ, ಜು 12 (DaijiworldNews/PY): "ತಮ್ಮ ಪುತ್ರನನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸಿದ ಕಾರಣ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸುಮಲತಾ ಅವರ ವಿರುದ್ದ ರಾಜಕೀಯ ಮಾಡುತ್ತಿದ್ದಾರೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ದೂರಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸುಮಲತಾ ಅವರು ಕೆಆರ್ಎಸ್ ಅಣೆಕಟ್ಟೆ ಬಿರುಕು ಬಿಟ್ಟಿದೆ ಎಂದು ಆರೋಪ ಮಾಡಿದ್ದಾರೆ. ಗಣಿ ಇಲಾಖೆಯಾದರೂ ಸ್ಥಳಕ್ಕೆ ಭೇಟಿ ನೀಡಿ ಈ ಬಗ್ಗೆ ಪರಿಶೀಲಿಸಿಬೇಕಿತ್ತು" ಎಂದಿದ್ದಾರೆ.
"ಕೆಆರ್ಎಸ್ನ 20 ಕಿ.ಮೀ ಸುತ್ತಮುತ್ತಲೂ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಜೆಡಿಎಸ್ ನಾಯಕರ ಗಣಿ ಕಂಪೆನಿಗಳಿವೆ ಎಂದು ಆರೋಪಿಸಲಾಗಿದೆ. ಇದರಲ್ಲಿ ಆಡಳಿ ಪಕ್ಷ ಕೂಡಾ ಭಾಗಿಯಾಗಿದ್ದು, ಈ ವಿಚಾರದ ಬಗ್ಗೆ ಸರ್ಕಾರ ಮಾತನಾಡುತ್ತಿಲ್ಲ" ಎಂದು ಟೀಕಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ ಅವರು, "ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮಾಲಿನ್ಯ ಮಂಡಳಿಯ ಅಧಿಕಾರಿ ವರ್ಗಾವಣೆಗೆ 17 ಕೋಟಿ ರೂ. ಡೀಲಿಂಗ್ ಮಾಡಿದ್ದು, ಸುಳ್ಳಾ?. ಸರ್ಕಾರಕ್ಕೆ ಮಾನ ಮರ್ಯಾದೆ, ನಾಚಿಕೆ ಇಲ್ಲ" ಎಂದು ಕಿಡಿಕಾರಿದ್ದಾರೆ.