ನವದೆಹಲಿ, ಜು 12 (DaijiworldNews/PY): ಹೊಸ ಐಟಿ ನಿಯಮಗಳ ಪ್ರಕಾರ ಟ್ವಿಟರ್ ತನ್ನ ಮೊದಲ ಕುಂದುಕೊರತೆ ಪರಿಹಾರದ ವರದಿಯನ್ನು ಸಲ್ಲಿಸಿದೆ.
ಮೇ 26 ಹಾಗೂ ಜೂನ್ 25 ರ ನಡುವೆ ಒಟ್ಟು 38 ದೂರುಗಳನ್ನು ಸ್ವೀಕರಿಸಲಾಗಿದೆ. ಗೌಪ್ಯತೆ ಉಲ್ಲಂಘನೆಯ ಕಾರಣದಿಂದ 133 ಪೋಸ್ಟ್ಗಳ ವಿರುದ್ದ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ಕಾರಣಕ್ಕೆ 18,385 ಖಾತೆಗಳನ್ನು ಅಮಾನತು ಮಾಡಲಾಗಿದೆ. ಭಯೋತ್ಪಾದನೆಗೆ ಉತ್ತೇಜನ ನೀಡಿದ ಕಾರಣಕ್ಕೆ 4,179 ಖಾತೆಗಳನ್ನು ಅಮಾನತುಗೊಳಿಸಿದೆ.
"ಇನ್ನೂ 56 ಟ್ವಿಟರ್ ಖಾತೆಗಳನ್ನು ಅಮಾನತುಗೊಳಿಸುವಂತೆ ಕುಂದುಕೊರತೆ ಅಧಿಕಾರಿಗೆ ದೂರು ಬಂದಿತ್ತು. ಇವೆಲ್ಲವನ್ನೂ ಪರಿಹರಿಸಲಾಗಿದೆ ಮತ್ತು ಸೂಕ್ತ ಪ್ರತಿಕ್ರಿಯೆಗಳನ್ನು ಕಳುಹಿಸಲಾಗಿದೆ. ಆದರೆ, ಇದರಲ್ಲಿ ಏಳು ಅಮಾನತುಗೊಳಿಸಲಾದ ಟ್ವಿಟರ್ ಖಾತೆಗಳನ್ನು ಪುನಃ ಸಕ್ರಿಯಗೊಳಿಸಲಾಗಿದೆ. ಮೇ 25 ರಿಂದ ಜೂನ್ 26 ರವರೆಗೆ ಹೊಸ ಐಟಿ ನಿಯಮಗಳ ಅನುಸಾರಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ" ಎಂದು ಟ್ವಿಟರ್ ಹೇಳಿದೆ.
ಟ್ವಿಟರ್ ಭಾರತದ ಸ್ಥಾನಿಕ ಕುಂದುಕೊರತೆ ಅಧಿಕಾರಿಯನ್ನಾಗಿ ವಿನಯ್ ಪ್ರಕಾಶ್ ಅವರನ್ನು ಭಾನುವಾರ ನೇಮಕ ಮಾಡಿದೆ. ಕೇಂದ್ರ ಸರ್ಕಾರದ ಹೊಸ ಐಟಿ ನಿಯಮಗಳ ಪ್ರಕಾರ, ಟ್ವಿಟರ್ ಭಾರತದಲ್ಲಿ ಮುಖ್ಯ ಅನುಸರಣಾ ಅಧಿಕಾರಿ, ನೋಡೆಲ್ ಅಧಿಕಾರಿ ಹಾಗೂ ಸ್ಥಾನಿಕ ಕುಂದುಕೊರತೆ ಪರಿಹಾರ ಅಧಿಕಾರಿಯನ್ನು ನೇಮಿಸಬೇಕಿದೆ. ಐಟಿ ನಿಯಮ ಪಾಲನೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಟ್ವಿಟರ್ ನಡುವೆ ಸಂಘರ್ಷ ಏರ್ಪಟ್ಟಿದ್ದು, ಹೈಕೋರ್ಟ್ ಮೆಟ್ಟಿಲೇರಿದೆ.