ಕೇರಳ, ಜು 12 (DaijiworldNews/PY): ಮಲಂಕಾರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್ ಆಫ್ ಇಂಡಿಯಾದ ಸರ್ವೋಚ್ಚ ಮುಖ್ಯಸ್ಥ ಬಸೆಲಿಯಾಸ್ ಮಾರ್ಥೋಮಾ ಪಾಲೋಸ್ II (74) ಅವರು ಪರುಮಾಲದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದು, ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಕಳೆದ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.
ಬಸೆಲಿಯಾಸ್ ಅವರು 2019ರ ಡಿಸೆಂಬರ್ನಿಂದ ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಈ ವರ್ಷ ಫೆಬ್ರವರಿಯಲ್ಲಿ ಅವರು ಕೊರೊನಾದಿಂದ ಚೇತರಿಸಿಕೊಂಡಿದ್ದರು.
ಮಲಂಕರ ಸಿರಿಯನ್ ಆರ್ಥೋಡಾಕ್ಸ್ ಚರ್ಚ್ನ ಮುಖ್ಯಸ್ಥ ಬಾಸೆಲಿಯೊಸ್ ಮಾರ್ಥೋಮಾ ಪಾಲೋಸ್ II ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, "ಎರಡನೇ ಬಾಸೆಲಿಯೊಸ್ ಮಾರ್ಥೋಮಾ ಪಾಲೋಸ್ II ಅವರ ನಿಧನದಿಂದ ದುಃಖವಾಗಿದೆ. ಅವರು ಸೇವೆ ಹಾಗೂ ಸಹಾನುಭೂತಿಗೆ ಹೆಸರುವಾಸಿಯಾಗಿದ್ದರು" ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಬಸೆಲಿಯಾಸ್ ಮಾರ್ಥೋಮಾ ಪಾಲೋಸ್ II ಅವರ ಮಲಂಕಾರದ 8ನೇ ಕ್ಯಾಥೊಲಿಕಾಸ್ ಆಗಿದ್ದರು. 2010ರಲ್ಲಿ ಪೂರ್ವ ಹಾಗೂ ಮಲಂಕಾರ ಮೆಟ್ರೊಪಾಲಿಟನ್ ಕ್ಯಾಥೊಲಿಕಾಸ್ ಆಗಿ ಅಧಿಕಾರ ಸ್ವೀಕರಿಸಿದ್ದರು.