ಅಸ್ಸಾಂ, ಜು 12 (DaijiworldNews/MS): ಯುನೈಟೆಡ್ ಪೀಪಲ್ಸ್ ರೆವಲ್ಯೂಷನರಿ ಫ್ರಂಟ್ (ಯುಪಿಆರ್ಎಫ್) ನ ಸ್ವ ಘೋಷಿತ ಕಮಾಂಡರ್-ಇನ್-ಚೀಫ್ ನನ್ನು ಶನಿವಾರ ತಡ ರಾತ್ರಿ ಆತನ ತಂಡದ ಸದಸ್ಯರೇ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಅಸ್ಸಾಂನ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ಬೆಲೆ ಬಾಳುವ ಮರದ ಕಳ್ಳಸಾಗಣೆಯಲ್ಲಿ ಕುಖ್ಯಾತನಾಗಿದ್ದ ಮಂಗಿನ್ ಖಲ್ಹೌ , "ಅಸ್ಸಾಂ ನ ವೀರಪ್ಪನ್ " ಎಂದೂ ಕರೆಯಲ್ಪಡುತ್ತಿದ್ದ. ಈತ ಯುನೈಟೆಡ್ ಪೀಪಲ್ಸ್ ರೆವಲ್ಯೂಷನರಿ ಫ್ರಂಟ್ ನ ಏಕೈಕ ಹಿರಿಯ ಸದಸ್ಯನಾಗಿದ್ದ. ಉಳಿದಂತೆ ಈ ಸಂಘಟನೆ ಹಲವಾರು ಮುಖಂಡರು ಪೊಲೀಸ್ ಎನ್ ಕೌಂಟರ್ ನಲ್ಲಿ ಹತರಾಗಿದ್ದರು. ಮತ್ತು ಉಳಿದ ಕೆಲವಾರು ಮಂದಿ ಕಳೆದ ಒಂದು ವರ್ಷದಲ್ಲಿ ಪೊಲೀಸರಿಗೆ ಶರಣಾಗಿದ್ದರು.
ನಾಗಾಲ್ಯಾಂಡ್ನ ವಾಣಿಜ್ಯ ಕೇಂದ್ರವಾದ ದಿಮಾಪುರದಿಂದ ಸುಮಾರು 15 ಕಿ.ಮೀ. ದೂರದ ಹಾಗೂ ಆಂಗ್ಲಾಂಗ್ ಜಿಲ್ಲಾ ಕೇಂದ್ರ ಕಚೇರಿ ದಿಫುವಿನಿಂದ 56 ಕಿ.ಮೀ ದೂರದಲ್ಲಿರುವ ಬೊಕಾಜನ್ ಪಟ್ಟಣದ ಹೊರವಲಯದಲ್ಲಿರುವ ಬೆಟ್ಟದ ಭೂಪ್ರದೇಶವಾದ ಖೆಂಗ್ಪಿಬುಂಗ್ನಲ್ಲಿ ರಾತ್ರಿ ತಂಡದೊಳಗೆ ಅಂತರಿಕ ಒಳಜಗಳ ನಡೆದು ವಿಕೋಪಕ್ಕೆ ತಿರುಗಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಶವವನ್ನು ಬೊಕಾಜನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅದನ್ನು ಮರಣೋತ್ತರ ಪರೀಕ್ಷೆಗಾಗಿ ಡಿಫುಗೆ ಕಳುಹಿಸಲಾಗಿದೆ.
ಯುಪಿಆರ್ಎಫ್ ಹೆಚ್ಚಾಗಿ ಅಸ್ಸಾಂನ ದಕ್ಷಿಣ ಬೆಟ್ಟಗಳಲ್ಲಿ ವಾಸಿಸುವ ಕುಕಿ ಸಮುದಾಯಕ್ಕೆ ಸೇರಿದ ಕಾರ್ಯಕರ್ತರನ್ನು ಒಳಗೊಂಡಿರುತ್ತದೆ ಮತ್ತು ಕಳೆದ ದಶಕದಲ್ಲಿ ಸಿಂಗಾಸನ್ ಬೆಟ್ಟಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮ್ಯಾನ್ಮಾರ್ ಮೂಲಕ ಚೀನಾದ ಯುನಾನ್ ಮೂಲದ ಆರ್ಡನೆನ್ಸ್ ಕಾರ್ಖಾನೆಯಿಂದ ರೈಫಲ್ಗಳನ್ನು ಖರೀದಿಸಿದ ನಂತರ ಕೆಲವು ಕುಖ್ಯಾತಿಯನ್ನು ಗಳಿಸಿತ್ತು.